ಪಾಟ್ನಾ: ಬಿಹಾರದ ಬೇಗುಸರೈನಲ್ಲಿ 25 ವರ್ಷದ ಅಂಕಿತಾ ಕುಮಾರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಬೆಳಕಿಗೆ ಬಂದಿದೆ. ಅಂಕಿತಾ ಅವರ ತಾಯಿ ದ್ರೌಪದಿ ದೇವಿ ಅವರು ತಮ್ಮ ಅಳಿಯ ಮೊಹಮ್ಮದ್ ಅರ್ಜು ಮತ್ತು ಅವರ ಕುಟುಂಬ ಸದಸ್ಯರು ವರದಕ್ಷಿಣೆಗಾಗಿ ಕಿರುಕುಳ ನೀಡಿ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದರು. ಈಗ ಮಗಳನ್ನು ಕೊಲೆ ಮಾಡಿ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದಾರೆ.
ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಅಂಕಿತಾ ಪತಿ ಹಾಗೂ ಕುಟುಂಬದವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಅಂಕಿತಾ ಸಾವಿಗೆ ಕೆಲವು ಗಂಟೆಗಳ ಮೊದಲು ತನ್ನ ತಾಯಿಯೊಂದಿಗೆ ನಡೆಸಿದ ಸಂಭಾಷಣೆ ಪ್ರಕರಣದಲ್ಲಿ ಮಹತ್ವ ಪಡೆದಿದೆ. ಆಕೆಯ ತಾಯಿಯ ಪ್ರಕಾರ, ಅಕ್ಟೋಬರ್ 19 ರ ರಾತ್ರಿ, ಅಂಕಿತಾ ಕಣ್ಣೀರು ಸುರಿಸುತ್ತಾ ಆಕೆಗೆ ಕರೆ ಮಾಡಿ ತನ್ನ ಅತ್ತೆಯ ಮನೆಯಲ್ಲಿ ಎದುರಿಸುತ್ತಿರುವ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಳು. ಅಳುತ್ತಾ ತನ್ನ ತವರಿಗೆ ಹಿಂತಿರುಗುವುದಾಗಿ ಹೇಳಿದ್ದಳು. ಆಕೆಯ ತಾಯಿ ಬೆಳಿಗ್ಗೆ ತಾನೇ ಕಾರು ತರುವುದಾಗಿ ಭರವಸೆ ನೀಡಿದ್ದರು, ಮಗಳ ಮನೆಗೆ ಹೊರಡಬೇಕು ಅನ್ನುವಷ್ಟರಲ್ಲೇ ಮಗಳ ಸಾವಿನ ಸುದ್ದಿ ಬಂದಿದೆ. ವರದಕ್ಷಿಣೆ ಕಿರುಕುಳ ಮತ್ತು ಮತಾಂತರದ ಆರೋಪಗಳನ್ನು ಒಳಗೊಂಡಂತೆ ಸಾವಿನ ಸಂದರ್ಭಗಳನ್ನು ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ.
ಅಂಕಿತಾ ಕುಮಾರಿ ಬಿಹಾರದ ಮುಂಗೇರ್ ಜಿಲ್ಲೆಯ ಕಾಸಿಮ್ ಬಜಾರ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾಗಿದ್ದರು. 2021 ರಲ್ಲಿ, ಅವರು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ, ಅವರು ಬೇಗುಸರಾಯ್ ಜಿಲ್ಲೆಯ ಬರಿ ಬಲ್ಲಿಯಾ ನಿವಾಸಿ ಮೊಹಮ್ಮದ್ ಅರ್ಜು ಅವರನ್ನು ಭೇಟಿಯಾದರು. ಇಬ್ಬರೂ ಪ್ರೇಮ ಸಂಬಂಧವನ್ನು ಪ್ರಾರಂಭಿಸಿದರು ಮತ್ತು ನಂತರ ಒಟ್ಟಿಗೆ ವಾಸಿಸಲು ನಿರ್ಧರಿಸಿದರು.
ಅಂಕಿತಾ ಅವರ ಕುಟುಂಬವು ಈ ಸಂಬಂಧದ ಬಗ್ಗೆ ತಿಳಿದಾಗ, ಅವರು ವಿರೋಧಿಸಿದರು. ಮೇ 29, 2021 ರಂದು ಅಂಕಿತಾ ಹಠಾತ್ತನೆ ಮನೆಯಿಂದ ನಾಪತ್ತೆಯಾಗಿದ್ದರು. ನಂತರ, ಅವರ ತಾಯಿ ದ್ರೌಪದಿ ದೇವಿ ಕಾಸಿಮ್ ಬಜಾರ್ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದರು. ಕೆಲವು ದಿನಗಳ ನಂತರ, ಅಂಕಿತಾ ಮತ್ತು ಅರ್ಜು ನ್ಯಾಯಾಲಯಕ್ಕೆ ಹೋದರು. ಅಲ್ಲಿ, ಅಂಕಿತಾ ಅರ್ಜು ಜೊತೆ ವಾಸಿಸಲು ಇಚ್ಛೆ ವ್ಯಕ್ತಪಡಿಸಿದಳು. ಇಬ್ಬರೂ ವಯಸ್ಕರಾಗಿದ್ದರಿಂದ, ಅಂಕಿತಾ ತನ್ನ ನಿರ್ಧಾರದ ಪ್ರಕಾರ, ಅರ್ಜು ಜೊತೆ ಬರಿ ಬಲ್ಲಿಯಾಗೆ ತೆರಳಿದರು. ಹೀಗೆ ಅವರ ಸಂಬಂಧ ಪ್ರಾರಂಭವಾಯಿತು, ಮದುವೆ ಮತ್ತು ಒಟ್ಟಿಗೆ ವಾಸಿಸಲು ಕಾರಣವಾಯಿತು. ಆದರೆ, ಅಂಕಿತಾ ಅವರ ತಾಯಿ ಹೇಳುವ ಪ್ರಕಾರ, ಕಾಲಾನಂತರದಲ್ಲಿ ಇಬ್ಬರ ನಡುವೆ ವೈಮನಸ್ಸು ಆರಂಭವಾಯಿತು.
ಅಂಕಿತಾ ಅವರ ತಾಯಿ ದ್ರೌಪದಿ ದೇವಿ ಅವರ ಪ್ರಕಾರ, ಅಂಕಿತಾ ಹಿಂದೂ ಆಗಿದ್ದರು, ಆದರೆ ಅರ್ಜು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಮದುವೆಯ ನಂತರ, ಅರ್ಜು ಅವರ ಹಿರಿಯ ಸಹೋದರ ಮೊಹಮ್ಮದ್ ಅರ್ಮಾನ್ ಆಲಂ, ಅವರ ಪತ್ನಿ, ಸಹೋದರಿ ಮತ್ತು ಇತರ ಕುಟುಂಬ ಸದಸ್ಯರು ಅಂಕಿತಾ ಅವರನ್ನು ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದರು. ಅಂಕಿತಾ ಅವರ ಪೋಷಕರ ಮನೆಯಿಂದ ನಗದು ಮತ್ತು ವಸ್ತುಗಳನ್ನು ತರುವಂತೆ ಕೇಳಲಾಯಿತು ಎಂದು ತಾಯಿ ಆರೋಪಿಸಿದ್ದಾರೆ. ಮತಾಂತರವಾಗಲು ನಿರಾಕರಿಸಿದಕ್ಕೆ ಅವರನ್ನು ಥಳಿಸಿ ನಿಂದಿಸಲಾಯಿತು. ದ್ರೌಪದಿ ದೇವಿ ಅವರ ಪ್ರಕಾರ, ಕುಟುಂಬವು ಇಬ್ಬರ ನಡುವಿನ ವಿವಾದವನ್ನು ಪರಿಹರಿಸಲು ಹಲವಾರು ಬಾರಿ ಪ್ರಯತ್ನಿಸಿತು. ಅಂಕಿತಾ ಸ್ವಲ್ಪ ಸಮಯದವರೆಗೆ ತನ್ನ ಹೆತ್ತವರ ಮನೆಗೆ ಭೇಟಿ ನೀಡಿದ್ದರೂ, ನಂತರ ತನ್ನ ಗಂಡನ ಬಳಿಗೆ ಮರಳಿದರು. ಇದರ ನಂತರವೂ ಕಿರುಕುಳ ಮುಂದುವರೆದಿತ್ತು ಎಂದು ತಾಯಿ ತಿಳಿಸಿದ್ದಾರೆ.
ಅಂಕಿತಾ 2023 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳು. ಹೆಣ್ಣು ಮಗು ಜನಿಸಿದ ನಂತರ ದಂಪತಿಗಳ ನಡುವೆ ಉದ್ವಿಗ್ನತೆ ಹೆಚ್ಚಾಯಿತು ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. ದಸರಾ ಸಮಯದಲ್ಲಿ ಬಾಡಿ ಬಲ್ಲಿಯಾದಲ್ಲಿರುವ ದುರ್ಗಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅಂಕಿತಾ ಬಯಸಿದ್ದರು ಎಂದು ಕುಟುಂಬ ಹೇಳಿಕೊಂಡಿದೆ. ತನ್ನನ್ನು ಅಲ್ಲಿಗೆ ಕರೆದೊಯ್ಯುವಂತೆ ಆಕೆ ತನ್ನ ಪತಿಯನ್ನು ಕೇಳಿಕೊಂಡಿದ್ದರು.
ತನ್ನ ಸಮುದಾಯದ ಜನರು ಅವಳನ್ನು ನೋಡಿದರೆ ಅದು ವಿವಾದಕ್ಕೆ ಕಾರಣವಾಗಬಹುದು ಎಂಬ ಭಯದಿಂದ ಅರ್ಜು ಈ ವಿನಂತಿಯನ್ನು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆಯ ತಾಯಿಯ ಪ್ರಕಾರ, ಇದು ಇಬ್ಬರ ನಡುವಿನ ಸಂಘರ್ಷಕ್ಕೂ ಕಾರಣವಾಗಿತ್ತು. ಧರ್ಮ ಮತ್ತು ವರದಕ್ಷಿಣೆ ಕುರಿತಾದ ನಿರಂತರ ವಿವಾದದ ನಡುವೆ ಅಂಕಿತಾಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಕುಟುಂಬ ಸದಸ್ಯರು ಹೇಳುತ್ತಾರೆ. ಈ ಘಟನೆಗಳು ಮತ್ತು ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಕ್ಟೋಬರ್ 19 ರ ರಾತ್ರಿ, ಅಂಕಿತಾ ತನ್ನ ತಾಯಿ ದ್ರೌಪದಿ ದೇವಿಗೆ ಕರೆ ಮಾಡಿದಳು. ಆಕೆಯ ತಾಯಿಯ ಪ್ರಕಾರ, ವರದಕ್ಷಿಣೆಗಾಗಿ ತನ್ನ ಅತ್ತೆಯ ಮನೆಯಲ್ಲಿ ಹೊಡೆದು ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದಳು.
ದ್ರೌಪದಿ ದೇವಿ ಹೇಳುವಂತೆ, ಅಂಕಿತಾ ರಾತ್ರಿ 9 ಗಂಟೆ ಸುಮಾರಿಗೆ ತನ್ನೊಂದಿಗೆ ಮಾತನಾಡಿದ್ದಾಳೆ. ನಂತರ, ರಾತ್ರಿ 11:30 ರ ಸುಮಾರಿಗೆ ಮಗಳಿಂದ ಮತ್ತೊಂದು ಕರೆ ಬಂದಿತು. ಅವಳು ಭಯಭೀತಳಾಗಿ ಅಳುತ್ತಾ ಮನೆಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡಳು. ಆಕೆಯ ತಾಯಿಯ ಪ್ರಕಾರ, ಅಂಕಿತಾ, “ಅಮ್ಮಾ… ಅವನು ಪ್ರತಿದಿನ ವರದಕ್ಷಿಣೆ ಕೇಳುತ್ತಲೇ ಇರುತ್ತಾನೆ ಮತ್ತು ನಮ್ಮನ್ನು ಹೊಡೆಯುತ್ತಾನೆ. ನಾವು ಇನ್ನು ಮುಂದೆ ಅವನೊಂದಿಗೆ ವಾಸಿಸುವುದಿಲ್ಲ, ಇಲ್ಲದಿದ್ದರೆ ಅವನು ಒಂದು ದಿನ ನಮ್ಮನ್ನು ಕೊಲ್ಲುತ್ತಾನೆ. ಇಲ್ಲಿಂದ ನಮ್ಮನ್ನು ಕರೆದುಕೊಂಡು ಹೋಗು” ಎಂದು ಹೇಳಿದ್ದಳು. ಮಗಳ ಮಾತು ಕೇಳಿದ ನಂತರ, ಅವಳನ್ನು ಸಮಾಧಾನಪಡಿಸಿ ಬೆಳಿಗ್ಗೆ ಕಾರು ತೆಗೆದುಕೊಂಡು ಬರುವುದಾಗಿ ನಿಮ್ಮನ್ನೂ ತವರಿಗೆ ಕರೆದುಕೊಂಡು ಬರುವುದಾಗಿ ಭರವಸೆ ನೀಡಿದ್ದರಂತೆ. ಆದರೆ ಕೆಲವೇ ಗಂಟೆಗಳಲ್ಲಿ ಮಗಳು ಸಾವನ್ನಪ್ಪಿದ ಸುದ್ದಿ ಬಂದಿದೆ.
ಅಕ್ಟೋಬರ್ 20 ರಂದು ದಸರಾ (ವಿಜಯದಶಮಿ) ಸಂದರ್ಭದಲ್ಲಿ ಬೆಳಗಿನ ಜಾವ 2 ಗಂಟೆಗೆ ಮೊಹಮ್ಮದ್ ಅರ್ಜು ಅಂಕಿತಾ ನೇಣು ಬಿಗಿದುಕೊಂಡಿದ್ದಾಳೆ ಎಂದು ಕರೆ ಮಾಡಿ ತಿಳಿಸಿದ್ದಾನೆ. ಮಗಳ ಸಾವಿನ ಸುದ್ದಿ ತಿಳಿದ ಕುಟುಂಬವು ಶೋಕದಲ್ಲಿ ಮುಳುಗಿದೆ.. ಅಂಕಿತಾಳ ತಾಯಿ ಈ ಸಾವನ್ನು ಆತ್ಮಹತ್ಯೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಮೊದಲು ಅವಳನ್ನು ಹೊಡೆದು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದಾರೆ. ನಂತರ ಮೃತದೇಹವನ್ನು ಆತ್ಮಹತ್ಯೆಯಂತೆ ಬಿಂಬಿಸಲು ನೇಣು ಕುಣಿಕೆಯಿಂದ ನೇತು ಹಾಕಲಾಗಿದೆ ಎಂದಿದ್ದಾರೆ.
ಅಂಕಿತಾ ತಾಯಿ, ಆಕೆಯ ಪತಿ ಅರ್ಜು, ಅವರ ಸಹೋದರ ಮತ್ತು ಇತರ ಕುಟುಂಬ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ವರದಕ್ಷಿಣೆ ಕಿರುಕುಳ, ಮತಾಂತರಕ್ಕೆ ಒತ್ತಡ ಮತ್ತು ಕೊಲೆ ಸಂಚು ಸೇರಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅರ್ಜುನ ಹಿಂದಿನ ಪ್ರಕರಣಗಳನ್ನು ಸಹ ಉಲ್ಲೇಖಿಸಿದ್ದಾರೆ. ತಾಯಿಯ ಪ್ರಕಾರ, ಅರ್ಜು ಹಿಂದೆ ಹಿಂದೂ ಹುಡುಗಿಯನ್ನು ಅಪಹರಿಸಿದ್ದಕ್ಕಾಗಿ ಜೈಲಿನಲ್ಲಿದ್ದರು. ಬಲ್ಲಿಯಾ ಮುನ್ಸಿಫ್ ನ್ಯಾಯಾಲಯದಲ್ಲಿ ಬಾಕಿ ಇರುವ ಮತ್ತೊಂದು ಪ್ರಕರಣ ಮತ್ತು 2025 ರಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಅರ್ಜು ವಿರುದ್ಧ ದಾಖಲಾಗಿರುವ ಪ್ರಕರಣದ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.