ಶಿವಮೊಗ್ಗ: ಕೆಲ ದಿನಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಡಗೊಳ್ಳಿಯ ರೂಪಶ್ರೀ ಕೃಷ್ಣಮೂರ್ತಿ ಅವರ ಯೋಗಕ್ಷೇಮವನ್ನು ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದ ಪ್ರಧಾನ ಕಾರ್ಯದರ್ಶಿಗಳು ಹಾಗೂ ತಾಲ್ಲೂಕು ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಹೆಚ್.ಆರ್. ರವಿಕುಮಾರ್ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು.
ಆಸ್ಪತ್ರೆಗೆ ಭೇಟಿ ನೀಡಿದ ರವಿಕುಮಾರ್ ಅವರು, ರೂಪಶ್ರೀ ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಬಳಿಕ ರೂಪಶ್ರೀ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಅವರು, ವೈದ್ಯಕೀಯ ಚಿಕಿತ್ಸೆಗೆ ನೆರವಾಗುವಂತೆ ಸ್ಥಳದಲ್ಲೇ ಆರ್ಥಿಕ ಸಹಾಯ ಹಸ್ತಾಂತರಿಸಿದರು.
ರೂಪಶ್ರೀ ಬಗ್ಗೆ ಹೆಚ್.ಆರ್. ರವಿಕುಮಾರ್ ಆಡಿದ ಮಾತುಗಳು:
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಆರ್. ರವಿಕುಮಾರ್ ಅವರು, "ರೂಪಶ್ರೀ ಅವರು ಸದಾ ಸಮಾಜಮುಖಿ ಚಿಂತನೆಯುಳ್ಳ, ಎಲ್ಲರೊಂದಿಗೆ ಬೆರೆಯುವ ಮತ್ತು ಸದಾ ಕ್ರಿಯಾಶೀಲವಾಗಿರುವ ಹೆಣ್ಣುಮಗಳು. ಇಂತಹ ಹಸನ್ಮುಖಿ ಮಹಿಳೆ ರಸ್ತೆ ಅಪಘಾತ ಸಂಭವಿಸಿ ಗಂಭೀರ ಗಾಯಗಳಾಗಿರುವುದು ಅತ್ಯಂತ ನೋವಿನ ಸಂಗತಿ. ಅಪಘಾತದ ವಿಷಯ ತಿಳಿದಾಗ ಮನಸ್ಸಿಗೆ ತೀವ್ರ ಆಘಾತವಾಯಿತು. ಆದರೆ ಅವರು ಎಂತಹ ಕಷ್ಟದ ಸನ್ನಿವೇಶವನ್ನೂ ಎದುರಿಸುವ ಧೈರ್ಯಶಾಲಿ ವ್ಯಕ್ತಿತ್ವ ಹೊಂದಿದವರು" ಎಂದರು.
ಮುಂದುವರಿದು ಮಾತನಾಡಿದ ಅವರು, "ರೂಪಶ್ರೀ ಆದಷ್ಟು ಬೇಗ ಗುಣಮುಖರಾಗಿ ಮೊದಲಿನಂತೆ ಉತ್ಸಾಹದಿಂದ ತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳಲಿ ಎಂದು ಶ್ರೀ ಸಿಗಂದೂರು ಚೌಡೇಶ್ವರಿ ಅಮ್ಮನವರಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದೊಂದಿಗೆ ನಾವೆಲ್ಲರೂ ಸದಾ ಬೆಂಬಲವಾಗಿ ನಿಲ್ಲುತ್ತೇವೆ. ಅವರ ಮುಂದಿನ ಚಿಕಿತ್ಸೆಗೆ ಅಗತ್ಯವಿರುವ ಯಾವುದೇ ನೆರವು ನೀಡಲು ನಾವು ಸದಾ ಸಿದ್ಧರಿದ್ದೇವೆ" ಎಂದು ಕುಟುಂಬಸ್ಥರಿಗೆ ಅಭಯ ನೀಡಿದರು.
ಈ ವೇಳೆ ಸುಧಾಕರ ಕುಗ್ವೆ, ಗಣೇಶ್ ಹಾರಿಕೆ, ನಾಗರಾಜ್ ಕೈಸೋಡಿ, ರವಿ ಮಲೆಶಂಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..