LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅತ್ತೆ ಇಂದಿರಾ ಗಾಂಧಿ ಕಂಡರೆ ಸೋನಿಯಾಗೆ ಭಯ! ಧೈರ್ಯ ತುಂಬಲು ರಾಜೀವ್ ಹೇಳಿದ್ದೇನು ಗೊತ್ತಾ?

ಮದುವೆಯಾಗಿ ಗಂಡನ ಮನೆಗೆ ಬಂದ ಹೊಸತರಲ್ಲಿ ಅತ್ತೆಯ ಸ್ವಭಾವ ಅರ್ಥಮಾಡಿಕೊಳ್ಳುವುದೇ ಸೊಸೆಯರಿಗೆ ದೊಡ್ಡ ಸವಾಲು. ಅತ್ತೆ ಕೋಪಗೊಂಡರೆ ಮನೆಯ ವಾತಾವರಣವೇ ಬದಲಾಗುತ್ತದೆ. ಅಂತಹದ್ದೇ ಅನುಭವವನ್ನು ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸೊಸೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಎದುರಿಸಿದ್ದರಂತೆ! ಆದರೆ ಇಲ್ಲಿ ಅತ್ತೆ ಸಾಮಾನ್ಯ ವ್ಯಕ್ತಿಯಲ್ಲ, ದೇಶವನ್ನೇ ಆಳಿದ ಪ್ರಭಾವಿ ಪ್ರಧಾನಿ. ಅವರ ಕೋಪ ಕಂಡು ಸೋನಿಯಾ ಗಾಂಧಿ ಕೂಡ ಭಯಪಡುತ್ತಿದ್ದರಂತೆ. ಅಂತಹ ಸಂದರ್ಭಗಳಲ್ಲಿ ಪತಿ ರಾಜೀವ್ ಗಾಂಧಿ ಪತ್ನಿಗೆ ಹೇಳುತ್ತಿದ್ದ ಮಾತು ಮಾತ್ರ ತುಂಬಾ ವಿಶೇಷವಾಗಿತ್ತು.

ತಮ್ಮ 544 ಪುಟಗಳ ‘Belonging: A Journey of Love’ ಎಂಬ ಆತ್ಮಕಥೆಯಲ್ಲಿ ಸೋನಿಯಾ ಗಾಂಧಿ, ಗಾಂಧಿ ಕುಟುಂಬಕ್ಕೆ ಸೊಸೆಯಾಗಿ ಬಂದ ಆರಂಭದ ದಿನಗಳ ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅತ್ತೆ ಇಂದಿರಾ ಗಾಂಧಿ ಅವರ ಕೋಪ, ಕುಟುಂಬದೊಳಗಿನ ವಾತಾವರಣ, ಪತಿ ರಾಜೀವ್ ನೀಡುತ್ತಿದ್ದ ಸಾಂತ್ವನ ಹಾಗೂ ಮೊಮ್ಮಕ್ಕಳ ಮೇಲಿದ್ದ ಇಂದಿರಾ ಅವರ ಪ್ರೀತಿಯ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಅತ್ತೆಯ ಕೋಪ ಕಂಡು ಬೆಚ್ಚಿಬೀಳುತ್ತಿದ್ದ ಸೋನಿಯಾ!

ಇಂದಿರಾ ಗಾಂಧಿ ಕೆಲವೊಮ್ಮೆ ಸಣ್ಣಪುಟ್ಟ ವಿಚಾರಗಳಿಗೂ ತೀವ್ರವಾಗಿ ಕೋಪಗೊಳ್ಳುತ್ತಿದ್ದರು. ಅವರ ಕೋಪದ ಮುಂದೆ ಮನೆಯ ಸಿಬ್ಬಂದಿ ಕೂಡ ಮಾತನಾಡಲು ಹೆದರುತ್ತಿದ್ದರು. ಒಮ್ಮೆ ಪ್ರಮುಖ ಕಾರ್ಯಕ್ರಮವೊಂದನ್ನು ನೆನಪಿಸಲು ಮರೆತ ಸಿಬ್ಬಂದಿಯೊಬ್ಬರಿಗೆ ಕೋಣೆಯ ಮೂಲೆಯಲ್ಲಿ ನಿಂತುಕೊಳ್ಳುವಂತೆ ಇಂದಿರಾ ಸೂಚಿಸಿದ್ದರಂತೆ. ಆ ದೃಶ್ಯ ಕಂಡು ಅಲ್ಲಿದ್ದ ಇತರ ಸಿಬ್ಬಂದಿಯೂ ಮುಜುಗರದಿಂದ ಓಡಾಡುತ್ತಿದ್ದರು ಎಂದು ಸೋನಿಯಾ ನೆನಪಿಸಿಕೊಂಡಿದ್ದಾರೆ.

ಇನ್ನೊಂದು ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಗೋಡೆಯ ಕಡೆ ಮುಖ ಮಾಡಿ ನಿಂತಿರುವುದನ್ನು ಸೋನಿಯಾ ನೋಡಿದ್ದರಂತೆ. ಆ ವ್ಯಕ್ತಿ ಯಾರೆಂದು ಆರಂಭದಲ್ಲಿ ಅವರಿಗೆ ತಿಳಿದಿರಲಿಲ್ಲ. ನಂತರ ಇಂದಿರಾ ಗಾಂಧಿ ಅವರೇ ಆ ನಾಯಕರಿಗೆ ಹಾಗೆ ನಿಲ್ಲುವಂತೆ ಸೂಚಿಸಿದ್ದರು ಎಂಬುದು ಗೊತ್ತಾಯಿತು. ಸುಮಾರು ಅರ್ಧ ಗಂಟೆಯಾದರೂ ಅವರು ಅದೇ ಸ್ಥಿತಿಯಲ್ಲಿ ನಿಂತಿದ್ದರು ಎಂದು ಸೋನಿಯಾ ಬರೆದಿದ್ದಾರೆ.

ಕೋಪಗೊಂಡರೆ ಊಟದ ತಟ್ಟೆಯನ್ನೇ ದೂರ ತಳ್ಳುತ್ತಿದ್ದರಂತೆ!

ಇಂದಿರಾ ಗಾಂಧಿ ಯಾರ ಮೇಲಾದರೂ ಬೇಸರಗೊಂಡರೆ ಅವರೊಂದಿಗೆ ಹಲವು ದಿನಗಳವರೆಗೆ ಮಾತನಾಡುತ್ತಿರಲಿಲ್ಲವಂತೆ. ಅಷ್ಟೇ ಅಲ್ಲ, ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರೊಂದಿಗೆ ಕಹಿ ಮಾತಿನ ಚಕಮಕಿ ನಡೆದಿದ್ದರೆ ಅದರ ಸಿಟ್ಟು ಮನೆಯಲ್ಲೂ ವ್ಯಕ್ತವಾಗುತ್ತಿತ್ತು.

ಒಮ್ಮೆ ಊಟದ ಸಮಯದಲ್ಲಿ ಕೋಪಗೊಂಡ ಇಂದಿರಾ ಗಾಂಧಿ ತಮ್ಮ ಊಟದ ತಟ್ಟೆಯನ್ನೇ ಮೇಜಿನ ಇನ್ನೊಂದು ಬದಿಗೆ ತಳ್ಳಿದ್ದರಂತೆ. ಇಂತಹ ಘಟನೆಗಳು ಸೋನಿಯಾಗೆ ಸಾಕಷ್ಟು ಆತಂಕ ಉಂಟುಮಾಡುತ್ತಿದ್ದವು. ತಮ್ಮ ತಂದೆಯ ಕೋಪದ ಸ್ವಭಾವವೂ ಇಂತಹ ಸಂದರ್ಭಗಳಲ್ಲಿ ನೆನಪಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಪತ್ನಿಯ ಭಯ ಗಮನಿಸಿ ರಾಜೀವ್ ಹೇಳುತ್ತಿದ್ದ ಮಾತೇನು?

ಅತ್ತೆ ಇಂದಿರಾ ಗಾಂಧಿ ಕೋಪಗೊಂಡಾಗ ಸೋನಿಯಾ ಗಾಂಧಿ ಒಳಗೊಳಗೆ ನಡುಗುತ್ತಿದ್ದರಂತೆ. ಆದರೆ ಪತಿ ರಾಜೀವ್ ಗಾಂಧಿ ಮಾತ್ರ ಇಂತಹ ಸಂದರ್ಭಗಳಲ್ಲಿ ಗಾಬರಿಯಾಗುತ್ತಿರಲಿಲ್ಲ. ಪತ್ನಿಯ ಆತಂಕವನ್ನು ಗಮನಿಸಿ ಸಮಾಧಾನಪಡಿಸುತ್ತಿದ್ದರು.

“ಅಷ್ಟೊಂದು ಭಯಪಡಬೇಡ” (Don’t let yourself get so scared) ಎಂದು ರಾಜೀವ್ ಗಾಂಧಿ ಹೇಳುತ್ತಿದ್ದರಂತೆ.

ಈ ಒಂದು ಮಾತು ಸೋನಿಯಾಗೆ ಧೈರ್ಯ ನೀಡುತ್ತಿತ್ತು. ಆರಂಭದಲ್ಲಿ ಅತ್ತೆಯ ಕೋಪಕ್ಕೆ ಹೆದರುತ್ತಿದ್ದ ತಾವು, ಕ್ರಮೇಣ ಇಂದಿರಾ ಗಾಂಧಿ ಅವರ ಸ್ವಭಾವವನ್ನು ಅರ್ಥಮಾಡಿಕೊಂಡೆ ಎಂದು ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

ಕೋಪದ ಬಳಿಕ ಪಶ್ಚಾತ್ತಾಪಪಡುತ್ತಿದ್ದ ಇಂದಿರಾ!

ಇಂದಿರಾ ಗಾಂಧಿ ಕೋಪಗೊಂಡರೂ ನಂತರ ತಮ್ಮ ವರ್ತನೆಗೆ ಪಶ್ಚಾತ್ತಾಪ ಪಡುತ್ತಿದ್ದರು. ಯಾರನ್ನಾದರೂ ನೋಯಿಸಿದ್ದರೆ ತಮ್ಮದೇ ರೀತಿಯಲ್ಲಿ ಅದನ್ನು ವ್ಯಕ್ತಪಡಿಸಿ ಸಂಬಂಧ ಸರಿಪಡಿಸಲು ಪ್ರಯತ್ನಿಸುತ್ತಿದ್ದರು. ಆದರೆ ಯಾರಾದರೂ ತಮ್ಮ ನಂಬಿಕೆಗೆ ದ್ರೋಹ ಬಗೆದರೆ ಮಾತ್ರ ಅವರನ್ನು ಮತ್ತೆ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಅಂತಹವರಿಂದ ಸಂಪೂರ್ಣ ದೂರ ಉಳಿಯುತ್ತಿದ್ದರು ಎಂದು ಸೋನಿಯಾ ವಿವರಿಸಿದ್ದಾರೆ.

ಹಳೆಯ ಫೋಟೋ, ಸೀರೆಗಳೇ ಕೋಪ ಮರೆಯಲು ಸಂಗಾತಿ!

ಕೋಪ ಮತ್ತು ಒತ್ತಡದಿಂದ ಹೊರಬರಲು ಇಂದಿರಾ ಗಾಂಧಿ ಮನೆಯ ಕೆಲವು ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರಂತೆ. ಹಳೆಯ ಫೋಟೋಗಳನ್ನು ತೆಗೆದು ದಿನಾಂಕದ ಪ್ರಕಾರ ಜೋಡಿಸುವುದು, ತಮ್ಮ ಸೀರೆಗಳನ್ನು ವಿಂಗಡಿಸಿ ಅವುಗಳ ಮೂಲದ ವಿವರಗಳನ್ನು ಗುರುತಿಸುವುದು ಅವರಿಗೆ ಇಷ್ಟವಾಗಿತ್ತು.

ಕೆಲವು ಸೀರೆಗಳನ್ನು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಲು ಪ್ರತ್ಯೇಕವಾಗಿ ಇಡುತ್ತಿದ್ದರು. ಇಂತಹ ಕೆಲಸಗಳಲ್ಲಿ ಕುಟುಂಬದವರ ಸಹಾಯವನ್ನೂ ಪಡೆಯುತ್ತಿದ್ದರು ಎಂದು ಸೋನಿಯಾ ನೆನಪಿಸಿಕೊಂಡಿದ್ದಾರೆ.

ಮೊಮ್ಮಕ್ಕಳ ಒಂದು ನಗುವಿಗೆ ಕರಗುತ್ತಿದ್ದ ಅಜ್ಜಿ!

ಇಂದಿರಾ ಗಾಂಧಿ ಅವರ ವ್ಯಕ್ತಿತ್ವದ ಮತ್ತೊಂದು ಮೃದುವಾದ ಮುಖವನ್ನು ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಪರಿಚಯಿಸಿದ್ದಾರೆ. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಮೊಮ್ಮಕ್ಕಳಾಗಿ ಬಂದ ಬಳಿಕ ಇಂದಿರಾ ಅವರ ಕೋಪದ ಪ್ರಸಂಗಗಳು ಕಡಿಮೆಯಾಗತೊಡಗಿದವಂತೆ.

ಅಜ್ಜಿಯ ಮನಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಕೆಲವೊಮ್ಮೆ ಮೊಮ್ಮಕ್ಕಳನ್ನೇ ಮೊದಲು ಕಳುಹಿಸಲಾಗುತ್ತಿತ್ತು. ಅವರ ಒಂದು ನಗು, ಮುಗ್ಧ ಪ್ರಶ್ನೆ ಸಾಕಾಗಿತ್ತು; ಇಂದಿರಾ ಗಾಂಧಿ ಅವರ ಮನಸ್ಸು ಕರಗುತ್ತಿತ್ತು. ಮೊಮ್ಮಕ್ಕಳೊಂದಿಗೆ ಸಮಯ ಕಳೆಯುವುದು ಅವರಿಗೆ ಅಪಾರ ಸಂತೋಷ ನೀಡುತ್ತಿತ್ತು ಎಂದು ಸೋನಿಯಾ ಬರೆದುಕೊಂಡಿದ್ದಾರೆ.

ಹೀಗೆ ದೇಶದ ಅತ್ಯಂತ ಪ್ರಭಾವಿ ಪ್ರಧಾನಿಗಳಲ್ಲಿ ಒಬ್ಬರಾಗಿದ್ದ ಇಂದಿರಾ ಗಾಂಧಿ ಅವರ ಮನೆಯೊಳಗಿನ ಮತ್ತೊಂದು ವ್ಯಕ್ತಿತ್ವವನ್ನು ಸೋನಿಯಾ ಗಾಂಧಿ ತಮ್ಮ ನೆನಪುಗಳ ಮೂಲಕ ತೆರೆದಿಟ್ಟಿದ್ದಾರೆ. ಅತ್ತೆಯ ಕೋಪಕ್ಕೆ ಹೆದರುತ್ತಿದ್ದ ಸೊಸೆ, ಪತಿಯ ಸಾಂತ್ವನ, ಮೊಮ್ಮಕ್ಕಳ ಮೇಲಿನ ಅಜ್ಜಿಯ ಮಮತೆ… ಈ ಎಲ್ಲ ಘಟನೆಗಳು ಗಾಂಧಿ ಕುಟುಂಬದ ವೈಯಕ್ತಿಕ ಬದುಕಿನ ಅಪರೂಪದ ಚಿತ್ರಣವನ್ನು ನೀಡುತ್ತವೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅತ್ತೆ ಇಂದಿರಾ ಗಾಂಧಿ ಕಂಡರೆ ಸೋನಿಯಾಗೆ ಭಯ! ಧೈರ್ಯ ತುಂಬಲು ರಾಜೀವ್ ಹೇಳಿದ್ದೇನು ಗೊತ್ತಾ?ಇಡ್ಲಿ, ಪೂರಿ ಬದಿಗಿಡಿ.. 15 ನಿಮಿಷಗಳಲ್ಲಿ ತಯಾರಾಗುವ ಈ ಉಪಾಹಾರ ಸೇವಿಸಿ ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಿ!ದೀಪಾವಳಿ ಬೆನ್ನಲ್ಲೇ ಉತ್ತರ ಭಾರತದಲ್ಲಿ ವಾಯುಮಾಲಿನ್ಯ ತೀವ್ರ: ಬಾಹ್ಯಾಕಾಶದಿಂದಲೇ ಗೋಚರಿಸಿದ ದಟ್ಟ ಹೊಗೆ ಚಿತ್ರ ಬಿಡುಗಡೆ ಮಾಡಿದ ನಾಸಾ90 ಡಾಲರ್‌ಗಿಂತ ಕೆಳಕ್ಕೆ ಕುಸಿದ ಕಚ್ಚಾ ತೈಲ ಬೆಲೆ ; ಪೆಟ್ರೋಲ್, ಡೀಸೆಲ್ ಅಗ್ಗವಾಗುತ್ತಾ.?13 ತಿಂಗಳ ವ್ಯಾಲಿಡಿಟಿ, 150Mbps ವೇಗ, OTT ಸೌಲಭ್ಯ: BSNL ರೂ. 799 ಬ್ರಾಡ್ ಬ್ಯಾಂಡ್ ಪ್ಲಾನ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಶಾಕ್; ಹೋಮ್ ಲೋನ್, ಕಾರು ಸಾಲದ EMI ಹೆಚ್ಚಳ!“ಅಪ್ಪಾ, ಕಾರು ಪಂಕ್ಚರ್ ಆಗಿದೆ” ಎಂದ ಮಗಳು; ಐದೇ ನಿಮಿಷದಲ್ಲಿ ಬಂದಿದ್ದು ಸಾವಿನ ಸುದ್ದಿ!ವಿವಾದಕ್ಕೆ ಕಾರಣವಾಯ್ತು ಸೋನಿಯಾ ಗಾಂಧಿ ಆತ್ಮಚರಿತ್ರೆ: 1984ರ ಸಿಖ್ ವಿರೋಧಿ ದಂಗೆ ಹೇಳಿಕೆಗೆ HS ಫೂಲ್ಕಾ ತೀವ್ರ ಆಕ್ಷೇಪ; ಅಧಿಕೃತ ದಾಖಲೆಗಳ ಉಲ್ಲೇಖಿಸಿ ಸವಾಲುತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕಿಲ್ಲ! ಸುಪ್ರೀಂಕೋರ್ಟ್ ಮಹತ್ವದ ತೀರ್ಪುದೀಪಾವಳಿ ಶಾಪಿಂಗ್: ಈ ಬಾರಿ ಆನ್‌ಲೈನ್‌ನಲ್ಲಿ ಭಾರತೀಯರು ಅತಿ ಹೆಚ್ಚು ಖರೀದಿಸಿದ್ದೇನು ಗೊತ್ತಾ?