ಬೆಂಗಳೂರು: ಜಿಮ್‌ನಲ್ಲಿ ಬೆವರಿಳಿಸಿ, ಸಾಹಸ ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟು, ಹಂತ ಹಂತವಾಗಿ ಬೆಳೆದು ಇಂದು ನಾಯಕ ನಟನಾಗಿ ಗುರುತಿಸಿಕೊಂಡವರು ದುನಿಯಾ ವಿಜಯ್. ಯಾವುದೇ ಸಿನಿಮಾ ಹಿನ್ನೆಲೆಯ ಬಲವಿಲ್ಲದೆ ತಮ್ಮ ಪರಿಶ್ರಮದಿಂದಲೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ನಟ. ಆದರೆ, ಇದೀಗ ಇದೇ ನಟನ ಬಗ್ಗೆ ತಮಿಳು ನಟ ಹಾಗೂ ಯೂಟ್ಯೂಬರ್ ಬೈಲ್ವಾನ್ ರಂಗನಾಥನ್ ನೀಡಿರುವ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಒಬ್ಬ ಕಲಾವಿದನಿಗೆ ಸಿಗುವ ಗೌರವ ಆತನ ಪ್ರತಿಭೆ ಮತ್ತು ಪರಿಶ್ರಮದಿಂದ ಬರಬೇಕು. ಆದರೆ, ದುನಿಯಾ ವಿಜಯ್ ಅವರ ವಿಚಾರದಲ್ಲಿ ನಡೆದಿರುವುದೇ ಬೇರೆ. ಅವರ ಅಭಿನಯ ಅಥವಾ ಸಿನಿಮಾದಲ್ಲಿನ ಪಾತ್ರದ ಬಗ್ಗೆ ಮಾತನಾಡುವ ಬದಲು, ಅವರ ದೇಹದ ಆಕಾರ ಮತ್ತು ರೂಪವನ್ನು ಗುರಿಯಾಗಿಸಿಕೊಂಡು ಬೈಲ್ವಾನ್ ರಂಗನಾಥನ್ ವ್ಯಂಗ್ಯವಾಡಿದ್ದಾರೆ ಎನ್ನಲಾಗಿದೆ. ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ದುನಿಯಾ ವಿಜಯ್ ದೇಹದ ಬಗ್ಗೆ ಹೀಯಾಳಿಕೆ!
ಸದ್ಯ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅಭಿನಯದ ಬಹುನಿರೀಕ್ಷಿತ ‘ಮೂಕುತಿ ಅಮ್ಮನ್ 2’ ಸಿನಿಮಾದಲ್ಲಿ ದುನಿಯಾ ವಿಜಯ್ ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ತಾರಾಗಣದ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಬೈಲ್ವಾನ್ ರಂಗನಾಥನ್, ದುನಿಯಾ ವಿಜಯ್ ಅವರ ದೇಹದ ಆಕಾರ, ಮೈಬಣ್ಣ ಮತ್ತು ಮುಖದ ಲಕ್ಷಣಗಳ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ, ಅವರ ದೇಹದ ಆಕಾರವನ್ನು ಹಂದಿಮರಿಯೊಂದಿಗೆ ಹೋಲಿಕೆ ಮಾಡಿ ವ್ಯಂಗ್ಯವಾಡಿದ್ದಾರೆ. ಖ್ಯಾತ ಹಾಸ್ಯನಟ ಯೋಗಿ ಬಾಬು ಅವರೇ ಉತ್ತಮ ಎಂಬ ರೀತಿಯಲ್ಲಿ ಮಾತನಾಡಿದ್ದು, ಇಂತಹ ನಟನನ್ನು ಖಳನಾಯಕನ ಪಾತ್ರಕ್ಕೆ ಆಯ್ಕೆ ಮಾಡಲು ಬೇರೆ ಕಲಾವಿದರು ಸಿಗಲಿಲ್ಲವೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಪರಿಶ್ರಮದಿಂದ ಬೆಳೆದ ನಟನಿಗೆ ಅವಮಾನ.?
ದುನಿಯಾ ವಿಜಯ್ ಅವರ ಸಿನಿಮಾ ಪಯಣ ಸುಲಭವಾಗಿರಲಿಲ್ಲ. ಜಿಮ್ ತರಬೇತುದಾರನಾಗಿ ವೃತ್ತಿ ಆರಂಭಿಸಿದ ಅವರು, ಬಳಿಕ ಸಾಹಸ ಕಲಾವಿದರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಸಣ್ಣಪುಟ್ಟ ಪಾತ್ರಗಳ ಮೂಲಕ ಆರಂಭವಾದ ಅವರ ಪಯಣ ‘ದುನಿಯಾ’ ಚಿತ್ರದ ಮೂಲಕ ದೊಡ್ಡ ತಿರುವು ಪಡೆದುಕೊಂಡಿತು. ಅಲ್ಲಿಂದ ನಾಯಕ ನಟನಾಗಿ ಬೆಳೆದು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದರು.
ಇಂದು ಕನ್ನಡ ಚಿತ್ರರಂಗದ ಜೊತೆಗೆ ಪರಭಾಷೆಯ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಅದರಲ್ಲೂ ‘ಮೂಕುತಿ ಅಮ್ಮನ್ 2’ ಚಿತ್ರದ ಮೂಲಕ ತಮಿಳು ಪ್ರೇಕ್ಷಕರ ಮುಂದೆ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ದೈಹಿಕ ರೂಪದ ಬಗ್ಗೆ ಹೀಯಾಳಿಸಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ಆಕ್ರೋಶ
ಬೈಲ್ವಾನ್ ರಂಗನಾಥನ್ ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ದುನಿಯಾ ವಿಜಯ್ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಲಾವಿದನ ಪ್ರತಿಭೆಯನ್ನು ಟೀಕಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ, ದೇಹದ ಆಕಾರ ಮತ್ತು ಬಣ್ಣವನ್ನು ಮುಂದಿಟ್ಟುಕೊಂಡು ಅವಮಾನಿಸುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ದುನಿಯಾ ವಿಜಯ್ ಅವರ ಸಾಧನೆ ಮತ್ತು ಪರಿಶ್ರಮವನ್ನು ನೆನಪಿಸಿರುವ ಅಭಿಮಾನಿಗಳು, ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಬೈಲ್ವಾನ್ ರಂಗನಾಥನ್ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
.