ಅಂಡರ್-19 ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ಒಮಾನ್‌ನಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದ ವೇಳೆ ಅನುಭವಿಸಿದ ತೀವ್ರ ಒತ್ತಡ ಮತ್ತು ದೈಹಿಕ ನೋವಿನ ಕುರಿತು ಟೂರ್ನಿ ಶ್ರೇಷ್ಠ ಆರ್ಯವೀರ್ ಸೆಹ್ವಾಗ್ ಹಾಗೂ ನಾಯಕ ಲಕ್ಷ್ಯ ರಾಯಚಂದಾನಿ ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಪಾಕಿಸ್ತಾನ ನೀಡಿದ್ದ 338 ರನ್‌ಗಳ ಬೃಹತ್ ಗುರಿ ಬೆನ್ನಟ್ಟುವ ವೇಳೆ ಆರ್ಯವೀರ್ ಸೆಹ್ವಾಗ್ 61 ಎಸೆತಗಳಲ್ಲಿ 58 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಬ್ಯಾಟಿಂಗ್ ಮಾಡುವಾಗ ಚೆಂಡು ಬಲವಾಗಿ ತೋಳಿಗೆ ಬಡಿದು ತೀವ್ರ ನೋವು ಮತ್ತು ಊತ ಕಾಣಿಸಿಕೊಂಡಿತ್ತು. ಆದರೆ, ಪಾಕಿಸ್ತಾನದಂತಹ ಬಲಿಷ್ಠ ಎದುರಾಳಿ ವಿರುದ್ಧ ಫೈನಲ್ ಆಡುವ ಅವಕಾಶ ಮತ್ತೆ ಜೀವನದಲ್ಲಿ ಸಿಗದಿರಬಹುದು ಎಂದು ಭಾವಿಸಿದ ಆರ್ಯವೀರ್, ತಂಡಕ್ಕಾಗಿ ನೋವನ್ನೂ ಲೆಕ್ಕಿಸದೆ ಬ್ಯಾಟಿಂಗ್ ಮುಂದುವರಿಸಿ ಅರ್ಧಶತಕ ಬಾರಿಸಿದರು.
ಪಂದ್ಯದ ಒಂದು ಹಂತದಲ್ಲಿ ಭಾರತ 252 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಆತಂಕದ ಕ್ಷಣಗಳಲ್ಲಿ ಆರ್ಯವೀರ್ 32ನೇ ಓವರ್‌ನಿಂದಲೇ ಡಗೌಟ್‌ನಲ್ಲಿ ಕುಳಿತು ಸೀತಾರಾಮ, ಸೀತಾರಾಮ ಎಂದು ದೇವರ ನಾಮಸ್ಮರಣೆ ಮಾಡುತ್ತಾ ಮನಸ್ಸನ್ನು ಶಾಂತವಾಗಿಟ್ಟುಕೊಂಡಿದ್ದರಂತೆ. ನಾಯಕ ಲಕ್ಷ್ಯ ಕೂಡ ದೇವರ ಪ್ರಾರ್ಥನೆಯಲ್ಲಿ ತೊಡಗಿದ್ದರು. ಅಂತಿಮವಾಗಿ ಮನಾಲ್ ಚೌಹಾಣ್ (47) ಮತ್ತು ಮೋಹಿತ್ ಉಲ್ವಾ (ಅಜೇಯ 49) ಅವರ ಅದ್ಭುತ ಜೊತೆಯಾಟ ಹಾಗೂ ಕೊನೆಯ ಎಸೆತದಲ್ಲಿ ಮೋಹಿತ್ ಬಾರಿಸಿದ ಬೌಂಡರಿಯಿಂದ ಭಾರತ ಐತಿಹಾಸಿಕ ಗೆಲುವು ದಾಖಲಿಸಿತು.
ಇಡೀ ಟೂರ್ನಿಯಲ್ಲಿ 5 ಪಂದ್ಯಗಳಿಂದ 90.25ರ ಸರಾಸರಿಯಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 361 ರನ್ ಕಲೆಹಾಕಿದ ಆರ್ಯವೀರ್, ಅತಿ ಹೆಚ್ಚು 16 ಸಿಕ್ಸರ್ ಸಿಡಿಸಿ ತಂದೆ ವೀರೇಂದ್ರ ಸೆಹ್ವಾಗ್ ಪರಂಪರೆಯನ್ನು ಮುಂದುವರಿಸಿದ್ದಾರೆ. ವೈಯಕ್ತಿಕ ದಾಖಲೆಗಿಂತ ದೇಶಕ್ಕೆ ಟ್ರೋಫಿ ಗೆದ್ದುಕೊಡುವುದೇ ತಮ್ಮ ಮುಖ್ಯ ಗುರಿಯಾಗಿತ್ತು ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ಉಸ್ಮಾನ್ ಖಾನ್ (107) ಶತಕದ ನೆರವಿನಿಂದ 337 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತದ ಪರ ಲಕ್ಷ್ಯ ರಾಯಚಂದಾನಿ (80) ಮತ್ತು ಆರ್ಯವೀರ್ ಮೊದಲ ವಿಕೆಟ್‌ಗೆ 95 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು. ಕೊನೆಯಲ್ಲಿ ಮೋಹಿತ್ ಉಲ್ವಾ ಮತ್ತು ಚಿಗುರುಪಾಟಿ ವೆಂಕಟ (ಅಜೇಯ 11) ತಂಡವನ್ನು ಗೆಲುವಿನ ದಡ ಸೇರಿಸಿದರು.