LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್‌ಸಿಒ ಆಹ್ವಾನಕ್ಕೆ ಕಾಂಗ್ರೆಸ್ ಕಿಡಿ

ನವದೆಹಲಿ- ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿರುವುದು, ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಸಿಂಧೂ ನದಿ ನೀರು ಒಪ್ಪಂದದ ಬಿಕ್ಕಟ್ಟು ಮುಂದುವರಿದಿರುವ ನಡುವೆಯೇ, ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ನಾಗರಿಕ ಸಂವಾದ ವೇದಿಕೆಗೆ ಪಾಕಿಸ್ತಾನವನ್ನು ಭಾರತ ಆಹ್ವಾನಿಸಿರುವುದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಪ್ರಶ್ನಿಸಿದ್ದು, ಭಾರತೀಯರ ಮೇಲೆ ದಾಳಿ ನಡೆಸಲು ಭಯೋತ್ಪಾದಕರನ್ನು ಕಳುಹಿಸುವ ದೇಶದ ಸಚಿವರಿಗೆ ಈಗ ಬಿರಿಯಾನಿ ಉಣಬಡಿಸಲು ಸರ್ಕಾರ ಮುಂದಾಗಿದೆ ಎಂದು ವ್ಯಂಗ್ಯವಾಡಿದೆ.

ನವೆಂಬರ್ 20ರಿಂದ 22ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಎಸ್‌ಸಿಒ ನಾಗರಿಕ ಸಂವಾದ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಆಹ್ವಾನ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ತನ್ನ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಿದೆ. ಪಾಕಿಸ್ತಾನದ ಹವಾಮಾನ ಬದಲಾವಣೆ ಮತ್ತು ಪರಿಸರ ಸಮನ್ವಯ ಸಚಿವ ಮುಸಾದಿಕ್ ಮಸೂದ್ ಮಲಿಕ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಆದರೆ, ಇದೇ ಮುಸಾದಿಕ್ ಮಸೂದ್ ಮಲಿಕ್ ಈ ಹಿಂದೆ ಭಾರತದ ಸಿಂಧೂ ನದಿ ನೀರು ನಿಯಂತ್ರಣ ಪ್ರಯತ್ನದ ವಿರುದ್ಧ ಕಠಿಣ ಹೇಳಿಕೆ ನೀಡಿದ್ದರು. ಭಾರತದ ನೀರಿನ ಹಕ್ಕುಗಳನ್ನು ನಿಯಂತ್ರಿಸಲು ಮುಂದಾಗುವ ಕೈಗಳನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನೇ ಇದೀಗ ಭಾರತಕ್ಕೆ ಆಹ್ವಾನಿಸಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಬಿಜೆಪಿ ಪದೇಪದೇ ಪಾಕಿಸ್ತಾನದ ಮೇಲಿನ ಪ್ರೀತಿಯನ್ನು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದೆ. ಪ್ರಧಾನಿ ಮೋದಿ ಅವರ ಹಿಂದಿನ ಪಾಕಿಸ್ತಾನ ಭೇಟಿಯನ್ನೂ ಉಲ್ಲೇಖಿಸಿರುವ ಕಾಂಗ್ರೆಸ್, ಪಾಕಿಸ್ತಾನದ ವಿರುದ್ಧ ಸರ್ಕಾರದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದೆ.

ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಮಾತನಾಡಿ, ಎಸ್‌ಸಿಒ ವೇದಿಕೆಯಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆ ಸಾಮಾನ್ಯವಾದರೂ, ಭಾರತದ ಪ್ರಮುಖ ಆತಂಕಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದಿದ್ದಾರೆ. ಬೈಸರನ್ ಘಟನೆಯ ನಂತರ ಪಾಕಿಸ್ತಾನ ತನ್ನ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ತಡೆಯುವಲ್ಲಿ ಪಾಕಿಸ್ತಾನದಿಂದ ಯಾವುದೇ ಮಹತ್ವದ ಕ್ರಮ ಕಂಡುಬಂದಿಲ್ಲ ಎಂಬುದು ಭಾರತದ ಕಳವಳವಾಗಿದೆ ಎಂದು ಹೇಳಿದ್ದಾರೆ.

ಮಾಜಿ ವಿದೇಶಾಂಗ ಸಚಿವ ಹಾಗೂ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಕೂಡ ಕೇಂದ್ರ ಸರ್ಕಾರದ ಪಾಕಿಸ್ತಾನ ನೀತಿಯನ್ನು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಿಲ್ಲ. ಸರ್ಕಾರ ಏನನ್ನು ತೋರಿಸಲು ಅಥವಾ ಸಾಧಿಸಲು ಬಯಸುತ್ತಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ನಂತರ ಅದರ ನಿಲುವಿನ ಆಧಾರದ ಮೇಲೆ ಪ್ರತಿಕ್ರಿಯೆ ನೀಡಬಹುದು ಎಂದು ಹೇಳಿದ್ದಾರೆ.

ಇನ್ನೊಂದೆಡೆ ಬಿಜೆಪಿ ನಾಯಕರು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ ಮಾತನಾಡಿ, ಪಾಕಿಸ್ತಾನ ತನ್ನ ಹಿತದೃಷ್ಟಿಯಿಂದ ಭಾರತದೊಂದಿಗೆ ಸಂಬಂಧ ಸುಧಾರಿಸಿಕೊಳ್ಳಬೇಕು. ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸಬೇಕು. ಭಾರತದೊಂದಿಗೆ ಸಂಘರ್ಷ ಮುಂದುವರಿಸಿದರೆ ಅದು ಪಾಕಿಸ್ತಾನಕ್ಕೇ ಹಾನಿಯಾಗಲಿದೆ ಎಂದು ಹೇಳಿದ್ದಾರೆ.

ಎಸ್‌ಸಿಒ ವೇದಿಕೆಯಲ್ಲಿ ಭಯೋತ್ಪಾದನೆ ಮತ್ತು ಅದರ ಹಣಕಾಸು ಪೂರೈಕೆಯ ವಿರುದ್ಧ ಭಾರತ ನಿರಂತರವಾಗಿ ಧ್ವನಿ ಎತ್ತುತ್ತಲೇ ಬಂದಿದೆ. ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ದ್ವಂದ್ವ ನಿಲುವು ಇರಬಾರದು ಎಂಬುದು ಭಾರತದ ಪ್ರತಿಪಾದನೆಯಾಗಿದೆ.

ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಕಳೆದ ವಾರ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಪಾಕಿಸ್ತಾನದ ನಾಗರಿಕತೆ ಮತ್ತು ಸಾಂಸ್ಕೃತಿಕ ವಿಕಸನ ನಮ್ಮಿಂದ ಸಂಪೂರ್ಣ ಭಿನ್ನವಾಗಿಲ್ಲ ಎಂದು ಹೇಳಿದ್ದರು.

ಭಾರತದ ಆಹ್ವಾನವನ್ನು ಸ್ವೀಕರಿಸಿರುವ ಪಾಕಿಸ್ತಾನ, ಎಸ್‌ಸಿಒ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸಾಂಸ್ಕೃತಿಕ ತಿಳುವಳಿಕೆ ಮತ್ತು ನಾಗರಿಕತೆಗಳ ನಡುವಿನ ಸಂವಾದದ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಈ ವೇದಿಕೆ ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದೆ. ಪರಸ್ಪರ ಗೌರವ ಮತ್ತು ಜನರ ನಡುವಿನ ಸಂಪರ್ಕ ಬಲಪಡಿಸುವುದಕ್ಕೆ ಬದ್ಧವಾಗಿರುವುದಾಗಿಯೂ ಹೇಳಿದೆ.

ಒಂದು ಕಡೆ ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಸಿಂಧೂ ನದಿ ನೀರಿನ ವಿಚಾರದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಕಠಿಣ ನಿಲುವು ಮುಂದುವರಿದಿದ್ದರೆ, ಮತ್ತೊಂದೆಡೆ ಎಸ್‌ಸಿಒ ವೇದಿಕೆಯ ಮೂಲಕ ಪಾಕಿಸ್ತಾನದೊಂದಿಗೆ ಸಂವಾದಕ್ಕೆ ಅವಕಾಶ ಕಲ್ಪಿಸಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಈ ನಡೆ ರಾಜತಾಂತ್ರಿಕ ಭಾಗವಹಿಸುವಿಕೆಯ ಭಾಗವೇ ಅಥವಾ ಪಾಕಿಸ್ತಾನದ ಬಗೆಗಿನ ನೀತಿಯಲ್ಲಿ ಬದಲಾವಣೆಯ ಸೂಚನೆಯೇ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಮುಂದಿಟ್ಟಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕ್ರಿಪ್ಟೋ ಕದಿಯಲು, ಐಫೋನ್‌ಗಳಿಗೆ ಸೋಂಕು ಹರಡಿಸಿದ ಖತರ್ ನಾಕ್ ಕಳ್ಳರುಟಿಕೆಟ್ ಬುಕಿಂಗ್ ವಿವರ ಶೀಘ್ರದಲ್ಲೇ ಪ್ರಕಟನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇನೆ ಎಂದ ಬಿಲ್ಕಿಸ್ ಬಾನೋಎಸ್‌ಸಿಒ ಆಹ್ವಾನಕ್ಕೆ ಕಾಂಗ್ರೆಸ್ ಕಿಡಿಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡಕ್ಕೆ ಹೊಸ ಸಾರಥಿ: ವೆಸ್ಟ್ ಇಂಡೀಸ್ ಮಾಜಿ ಕೋಚ್ ಶೇನ್ ಡೀಟ್ಜ್‌ಗೆ ಮಣೆ ಹಾಕಿದ ಪಿಸಿಬಿ!ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಫೈನಲ್‌ನಲ್ಲಿ ‘ಸೀತಾರಾಮ’ ಮಂತ್ರ: ಭಾರತದ ಐತಿಹಾಸಿಕ ಗೆಲುವಿನ ಹಿಂದಿನ ರೋಚಕ ಸಂಗತಿ ಬಿಚ್ಚಿಟ್ಟ ಆರ್ಯವೀರ್!ಜನವರಿ 1, 2027 ರಿಂದ ಆನ್‌ಲೈನ್ ಶಾಪಿಂಗ್ ನಿಯಮಗಳಲ್ಲಿ ಬದಲಾವಣೆ: ಖರೀದಿದಾರರು ತಿಳಿದಿರಬೇಕಾದ 6 ವಿಷಯಗಳುಮೇಕೆದಾಟು ವಿಚಾರದಲ್ಲಿ ಸಿಎಂ ವಿಜಯ್‌ಗೆ ಡಿಎಂಕೆ ಟಾಂಗ್ಸಿಜೆಐ ವಿರುದ್ಧ ಅಸಹ್ಯಕರ ಹೇಳಿಕೆಬಾಡಿ ಆಬ್ಸ್ ಪ್ರದರ್ಶಿಸಿ ಸೋಷಿಯಲ್ ಮೀಡಾದಲ್ಲಿ ಬೆಂಕಿ ಹಚ್ಚಿದ ರಣವೀರ್ ಸಿಂಗ್: ಹೊಸ ಸ್ಕಿನ್‌ಕೇರ್ ಜಾಹೀರಾತು ವೈರಲ್!