ನವದೆಹಲಿ-ವಿಶ್ವದ ಅತ್ಯಂತ ಹೆಚ್ಚು ಭೇಟಿ ನೀಡುವ ಜನಪ್ರಿಯ ವೆಬ್‌ಸೈಟ್‌ಗಳನ್ನೇ ಗುರಿಯಾಗಿಸಿಕೊಂಡು ಸೈಬರ್ ದಾಳಿಕೋರರು ದುರುದ್ದೇಶಪೂರಿತ ಕೋಡ್‌ಗಳನ್ನು ಅಳವಡಿಸಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಕ್ರಿಪ್ಟೋಕರೆನ್ಸಿ ಕದಿಯುವುದು, ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಲಪಟಾಯಿಸುವುದು ಹಾಗೂ ಐಫೋನ್‌ಗಳಿಗೆ ಮಾಲ್‌ವೇರ್ ಸೋಂಕು ಹರಡುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಭದ್ರತಾ ಸಂಶೋಧಕರು ತಿಳಿಸಿದ್ದಾರೆ.
ಜೂಮ್, ಎಚ್‌ಎಸ್‌ಬಿಸಿ, ಈಕ್ವಿಫ್ಯಾಕ್ಸ್, ಸಿಎನ್‌ಎನ್, ಸೇಲ್ಸ್‌ಫೋರ್ಸ್ ಮತ್ತು ಐಕಿಯಾ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಸಂಸ್ಥೆಗಳ ವೆಬ್‌ಸೈಟ್‌ಗಳು ಈ ಸೈಬರ್ ದಾಳಿಯ ಗುರಿಯಾಗಿವೆ. ವೆಬ್‌ಸೈಟ್ ಆಪ್ಟಿಮೈಸೇಶನ್ ವೇದಿಕೆಯಾದ ಆಪ್ಟಿಮೈಜಲಿ (Optimizely) ಮೂಲಕ ವಿವಿಧ ವಲಯಗಳ ಒಟ್ಟು 178 ಸಂಸ್ಥೆಗಳ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಬಳಕೆದಾರರನ್ನು ಗುರಿಯಾಗಿಸಿಕೊಂಡು ದುರುದ್ದೇಶಪೂರಿತ ಜಾವಾಸ್ಕ್ರಿಪ್ಟ್ ಕೋಡ್ ಬಳಸಲಾಗಿದೆ ಎಂದು ಭದ್ರತಾ ಸಂಶೋಧಕ ಸ್ಕಾಟ್ ಹೆಲ್ಮ್ ಬಹಿರಂಗಪಡಿಸಿದ್ದಾರೆ.
ಬಳಕೆದಾರರ ಹಣ, ವೈಯಕ್ತಿಕ ಮಾಹಿತಿ ಕದಿಯುವ ಸಂಚು
ಬಳಕೆದಾರರು ಕ್ರಿಪ್ಟೋಕರೆನ್ಸಿ ಮೂಲಕ ಪಾವತಿ ಮಾಡುವ ಸಂದರ್ಭದಲ್ಲಿ ಪಾವತಿ ವಿಳಾಸವನ್ನು ಬದಲಾಯಿಸಿ, ದಾಳಿಕೋರರ ಡಿಜಿಟಲ್ ವ್ಯಾಲೆಟ್‌ಗೆ ಹಣ ವರ್ಗಾವಣೆಯಾಗುವಂತೆ ಮಾಡುವ ಪ್ರಯತ್ನ ನಡೆದಿದೆ. ಅದೇ ರೀತಿ, ಗ್ರಾಹಕರು ಕ್ರೆಡಿಟ್ ಕಾರ್ಡ್ ವಿವರಗಳನ್ನು ನಮೂದಿಸುವಾಗ ಕಾರ್ಡ್ ಸಂಖ್ಯೆಗಳು ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಸ್ಕಿಮ್ಮಿಂಗ್ ತಂತ್ರ ಬಳಸಲಾಗಿದೆ.
ಇಷ್ಟಕ್ಕೇ ಸೀಮಿತವಾಗದ ದಾಳಿಕೋರರು, ಬಳಕೆದಾರರ ಬ್ರೌಸರ್ ಕುಕೀಗಳು ಮತ್ತು ಸ್ಕ್ರೀನ್‌ಶಾಟ್‌ಗಳನ್ನು ಕದಿಯಲು ಹಾಗೂ ಐಒಎಸ್ (iOS) ಸಾಧನಗಳಲ್ಲಿ ಎಕ್ಸ್‌ಪ್ಲಾಯ್ಟ್ ಕೋಡ್ ಅಳವಡಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಐಫೋನ್ ಬಳಕೆದಾರರ ಸುರಕ್ಷತೆಗೂ ಗಂಭೀರ ಅಪಾಯ ಎದುರಾಗುವ ಸಾಧ್ಯತೆ ಇದೆ.
178 ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿ ದುರುದ್ದೇಶಪೂರಿತ ಕೋಡ್!
ಸೈಬರ್ ಭದ್ರತಾ ಸಂಸ್ಥೆ ಹಡ್ಸನ್‌ರಾಕ್ ಕೂಡ ಈ ವೆಬ್‌ಸೈಟ್‌ಗಳ ಮೂಲಕ ಸಂದರ್ಶಕರಿಗೆ ದುರುದ್ದೇಶಪೂರಿತ ಕೋಡ್ ಪೂರೈಕೆಯಾಗಿರುವುದಕ್ಕೆ ಪುರಾವೆಗಳು ದೊರೆತಿವೆ ಎಂದು ತಿಳಿಸಿದೆ. ಈ ನಡುವೆ, ಆಪ್ಟಿಮೈಜಲಿ ಸ್ಕ್ರಿಪ್ಟ್‌ನಲ್ಲಿ ನಡೆದಿರುವ ಅನಧಿಕೃತ ಬದಲಾವಣೆಗಳ ಕುರಿತು ತನಿಖೆ ನಡೆಸುತ್ತಿರುವುದಾಗಿ ಸೇಲ್ಸ್‌ಫೋರ್ಸ್ ಹೇಳಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಂಬಂಧಿತ ಸ್ಕ್ರಿಪ್ಟ್‌ಗಳನ್ನು ನಿಷ್ಕ್ರಿಯಗೊಳಿಸಿರುವುದಾಗಿಯೂ ತಿಳಿಸಿದೆ.
ಆದರೆ, ಈ ದುರುದ್ದೇಶಪೂರಿತ ಕೋಡ್‌ಗಳು ಎಲ್ಲ ವೆಬ್‌ಸೈಟ್‌ಗಳಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿವೆಯೇ ಅಥವಾ ಬಳಕೆದಾರರ ಹಣ ಮತ್ತು ವೈಯಕ್ತಿಕ ಮಾಹಿತಿಗೆ ನಿಜವಾಗಿಯೂ ಹಾನಿಯಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದಾಳಿಯ ನಿಖರ ವ್ಯಾಪ್ತಿಯ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ರಾಯಿಟರ್ಸ್ ಸಂಪರ್ಕಿಸಿದ ಆಪ್ಟಿಮೈಜಲಿ, ಆಪಲ್, ಜೂಮ್, ಎಚ್‌ಎಸ್‌ಬಿಸಿ, ಈಕ್ವಿಫ್ಯಾಕ್ಸ್, ಸಿಎನ್‌ಎನ್ ಮತ್ತು ಐಕಿಯಾ ಸಂಸ್ಥೆಗಳು ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.
ಒಟ್ಟಿನಲ್ಲಿ, ಜಾಗತಿಕ ಮಟ್ಟದ ಪ್ರತಿಷ್ಠಿತ ಸಂಸ್ಥೆಗಳ ವೆಬ್‌ಸೈಟ್‌ಗಳನ್ನೇ ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಂಡಿರುವುದು ಡಿಜಿಟಲ್ ಸುರಕ್ಷತೆಯ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರತಿಷ್ಠಿತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದರೂ ಬಳಕೆದಾರರ ವೈಯಕ್ತಿಕ ಹಾಗೂ ಹಣಕಾಸಿನ ಮಾಹಿತಿ ಸಂಪೂರ್ಣ ಸುರಕ್ಷಿತ ಎಂಬ ಭರವಸೆ ಇಲ್ಲ ಎಂಬ ಎಚ್ಚರಿಕೆಯನ್ನು ಈ ಘಟನೆ ನೀಡಿದೆ.