LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇನೆ ಎಂದ ಬಿಲ್ಕಿಸ್ ಬಾನೋ

ನವದೆಹಲಿ- 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ತನ್ನ ಕುಟುಂಬದ ಏಳು ಸದಸ್ಯರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದಕ್ಕೆ ಸಂತ್ರಸ್ತೆ ಬಿಲ್ಕಿಸ್ ಬಾನೋ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನ್ಯಾಯಕ್ಕಾಗಿ ದೀರ್ಘಕಾಲ ಹೋರಾಡಿ ಗಳಿಸಿದ್ದ ಭದ್ರತೆಯ ಭಾವನೆ ಇದೀಗ ಮತ್ತೆ ಕಳೆದುಹೋಗಿದೆ. ನನಗೆ ಮತ್ತೊಮ್ಮೆ ಭಯವಾಗುತ್ತಿದೆ ಎಂದು ಅವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ತಮ್ಮ ವಕೀಲೆ, ಹಿರಿಯ ನ್ಯಾಯವಾದಿ ಶೋಭಾ ಗುಪ್ತಾ ಅವರ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ಬಿಲ್ಕಿಸ್ ಬಾನೋ, ಅಪರಾಧಿಗಳಿಗೆ ಜಾಮೀನು ನೀಡುವ ಮೊದಲು ಸುಪ್ರೀಂ ಕೋರ್ಟ್ ತಮ್ಮ ಅಭಿಪ್ರಾಯವನ್ನು ಕೇಳಿಲ್ಲ. ವಿಚಾರಣೆಗೆ ಅವಕಾಶವನ್ನೂ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಆದೇಶದ ಬಗ್ಗೆ ಮಾಧ್ಯಮಗಳ ವರದಿಗಳ ಮೂಲಕವೇ ತಿಳಿದುಕೊಂಡಿದ್ದಾಗಿ ಹೇಳಿದ್ದಾರೆ.

‘ನನ್ನನ್ನು ಸಂಪರ್ಕಿಸದೆ, ನನ್ನ ಮಾತು ಕೇಳಿಸಿಕೊಳ್ಳದೆ ಈ ಆದೇಶ ಹೊರಡಿಸಲಾಗಿದೆ. ಪತ್ರಿಕಾ ವರದಿಗಳ ಮೂಲಕವೇ ನನಗೆ ಈ ವಿಷಯ ತಿಳಿಯಿತು. ನ್ಯಾಯಾಲಯದಲ್ಲಿ ನನ್ನ ಧ್ವನಿ ಕೇಳಿಸುವಂತೆ ಏಕೆ ಅವಕಾಶ ಕಲ್ಪಿಸಲಿಲ್ಲ?’ ಎಂದು ಅವರು ಪ್ರಶ್ನಿಸಿದ್ದಾರೆ.

2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ತಾನು ಅನುಭವಿಸಿದ ಭೀಕರತೆಯನ್ನು ನೆನಪಿಸಿಕೊಂಡಿರುವ ಬಿಲ್ಕಿಸ್, ಆಗ ತನಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಐದು ತಿಂಗಳ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದೆ. ತನ್ನ ಮೂರು ವರ್ಷದ ಮಗಳು ಸಲೇಹಾ ಸೇರಿದಂತೆ ಕುಟುಂಬದ ಏಳು ಸದಸ್ಯರನ್ನು ಕಳೆದುಕೊಂಡಿದ್ದೆ. ಮನೆ, ಕುಟುಂಬ ಮಾತ್ರವಲ್ಲದೆ ಮಾನವೀಯತೆಯ ಮೇಲಿನ ನಂಬಿಕೆಯನ್ನೂ ಕಳೆದುಕೊಂಡಿದ್ದೆ ಎಂದು ನೋವು ತೋಡಿಕೊಂಡಿದ್ದಾರೆ.

‘ಆ ದಿನದಿಂದ ಕಳೆದ 24 ವರ್ಷಗಳಿಂದ ನನಗಾಗಿ ಮಾತ್ರವಲ್ಲದೆ ದೇಶದ ಎಲ್ಲ ಮಹಿಳೆಯರ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಿದ್ದೇನೆ. ಜನರ ಬೆಂಬಲ ಮತ್ತು ಒಗ್ಗಟ್ಟು ನನ್ನಲ್ಲಿ ಧೈರ್ಯ ತುಂಬಿತ್ತು. ಕಾನೂನು ಹೋರಾಟ ಮುಂದುವರಿಸಲು ಹಾಗೂ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ಅದು ನೆರವಾಗಿತ್ತು. ಆದರೆ ಈಗಿನ ಆದೇಶ ನನ್ನಲ್ಲಿದ್ದ ಭದ್ರತೆಯ ಭಾವನೆಯನ್ನು ಛಿದ್ರಗೊಳಿಸಿದೆ. ಹಳೆಯ ಭಯಗಳು ಮತ್ತೆ ಕಾಡುತ್ತಿವೆ. ನನಗಾಗಿ, ನನ್ನ ಕುಟುಂಬಕ್ಕಾಗಿ ಮತ್ತು ನನ್ನ ಮಕ್ಕಳಿಗಾಗಿ ಮತ್ತೊಮ್ಮೆ ಭಯಭೀತಳಾಗಿದ್ದೇನೆ’ ಎಂದು ಹೇಳಿದ್ದಾರೆ.

ಅಪರಾಧಿಗಳಿಗೆ ನೀಡಿರುವ ಜಾಮೀನು ಆದೇಶವನ್ನು ಪ್ರಶ್ನಿಸಿ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿರುವ ಅವರು, ‘ನನ್ನ ಮಕ್ಕಳು ಜೀವನಪೂರ್ತಿ ಭಯ ಮತ್ತು ನೋವಿನೊಂದಿಗೆ ಬದುಕುವಂತಾಗಬಾರದು. ನನ್ನ ಮೂರು ವರ್ಷದ ಮಗಳು ಸಲೇಹಾ ಬದುಕಲು ಅರ್ಹಳಾಗಿದ್ದಳು. ಆಕೆಯ ನೆನಪಿಗಾಗಿ ಮತ್ತು ದೇಶದ ಎಲ್ಲ ಮಹಿಳೆಯರ ನ್ಯಾಯಕ್ಕಾಗಿ ನಾನು ಈ ಹೋರಾಟ ಮುಂದುವರಿಸುತ್ತೇನೆ’ ಎಂದು ತಿಳಿಸಿದ್ದಾರೆ.

17 ವರ್ಷಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ ಅಪರಾಧಿಗಳು

ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಬಿಪಿನ್ ಚಂದ್ರ ಜೋಶಿ ಮತ್ತು ಪ್ರದೀಪ್ ಮೋರ್ಧಿಯಾ ಅವರ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಅಮಾನತುಗೊಳಿಸಿ ಷರತ್ತುಬದ್ಧ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಪಿ.ಬಿ. ವರಾಳೆ ಅವರನ್ನೊಳಗೊಂಡ ಪೀಠವು, ಇಬ್ಬರೂ ಅಪರಾಧಿಗಳು 17 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿರುವುದನ್ನು ಪರಿಗಣಿಸಿದೆ. ಅವರಲ್ಲಿ ಒಬ್ಬರಿಗೆ ತೀವ್ರ ಅಂಗವೈಕಲ್ಯವಿರುವ ಅಂಶವನ್ನೂ ಗಮನಿಸಿದೆ. ಅಲ್ಲದೆ, ಅವರ ಮೇಲ್ಮನವಿಗಳಲ್ಲಿ ಇನ್ನೂ ನಿರ್ಧಾರವಾಗಬೇಕಿರುವ ಕಾನೂನು ಮತ್ತು ವಾಸ್ತವಾಂಶಗಳ ಪ್ರಶ್ನೆಗಳಿವೆ ಎಂದು ಹೇಳಿದೆ. ವಿಚಾರಣಾ ನ್ಯಾಯಾಲಯ ವಿಧಿಸಿರುವ ಷರತ್ತುಗಳಿಗೆ ಒಳಪಟ್ಟು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆದೇಶಿಸಿದೆ.

2024ರ ಜನವರಿ 8ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ 11 ಅಪರಾಧಿಗಳಿಗೆ ನೀಡಲಾಗಿದ್ದ ವಿನಾಯಿತಿಯನ್ನು ರದ್ದುಗೊಳಿಸಿತ್ತು. ಗುಜರಾತ್ ಸರ್ಕಾರದ ವಿನಾಯಿತಿ ಆದೇಶವನ್ನು ಪ್ರಶ್ನಿಸಿ ನೀಡಿದ್ದ ತೀರ್ಪಿನಲ್ಲಿ, ವಿನಾಯಿತಿ ನೀಡುವ ಅಧಿಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಸೇರಿದ್ದರೂ ಗುಜರಾತ್ ಸರ್ಕಾರ ಅದನ್ನು ಚಲಾಯಿಸಿರುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಇದೀಗ ಆ 11 ಅಪರಾಧಿಗಳ ಪೈಕಿ ಇಬ್ಬರಿಗೆ ಜಾಮೀನು ದೊರೆತಿರುವುದು ಮತ್ತೆ ಚರ್ಚೆಗೆ ಕಾರಣವಾಗಿದೆ. ಜಾಮೀನು ಆದೇಶದಿಂದ ಆಘಾತಗೊಂಡಿರುವ ಬಿಲ್ಕಿಸ್ ಬಾನೋ, ತಮ್ಮ ಮತ್ತು ಕುಟುಂಬದ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸುವುದರ ಜೊತೆಗೆ ನ್ಯಾಯಕ್ಕಾಗಿ ಕಾನೂನು ಹೋರಾಟ ಮುಂದುವರಿಸುವ ಸಂಕಲ್ಪವನ್ನು ಪುನರುಚ್ಚರಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೋಷಕರಿಗೆ ಮೊದಲ ಬಾರಿ ವಿಮಾನ ಪ್ರಯಾಣದ ಸಪ್ರೈಸ್ ಉಡುಗೊರೆ ನೀಡಿದ ಮಗ: ಜೀವನದ ಅತ್ಯಮೂಲ್ಯ ಕ್ಷಣಗಳ ವಿಡಿಯೋ ಹೊಂಚಿಕೊಂಡ ಯುವಕಕ್ರಿಪ್ಟೋ ಕದಿಯಲು, ಐಫೋನ್‌ಗಳಿಗೆ ಸೋಂಕು ಹರಡಿಸಿದ ಖತರ್ ನಾಕ್ ಕಳ್ಳರುಟಿಕೆಟ್ ಬುಕಿಂಗ್ ವಿವರ ಶೀಘ್ರದಲ್ಲೇ ಪ್ರಕಟನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇನೆ ಎಂದ ಬಿಲ್ಕಿಸ್ ಬಾನೋಎಸ್‌ಸಿಒ ಆಹ್ವಾನಕ್ಕೆ ಕಾಂಗ್ರೆಸ್ ಕಿಡಿಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡಕ್ಕೆ ಹೊಸ ಸಾರಥಿ: ವೆಸ್ಟ್ ಇಂಡೀಸ್ ಮಾಜಿ ಕೋಚ್ ಶೇನ್ ಡೀಟ್ಜ್‌ಗೆ ಮಣೆ ಹಾಕಿದ ಪಿಸಿಬಿ!ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಫೈನಲ್‌ನಲ್ಲಿ ‘ಸೀತಾರಾಮ’ ಮಂತ್ರ: ಭಾರತದ ಐತಿಹಾಸಿಕ ಗೆಲುವಿನ ಹಿಂದಿನ ರೋಚಕ ಸಂಗತಿ ಬಿಚ್ಚಿಟ್ಟ ಆರ್ಯವೀರ್!ಜನವರಿ 1, 2027 ರಿಂದ ಆನ್‌ಲೈನ್ ಶಾಪಿಂಗ್ ನಿಯಮಗಳಲ್ಲಿ ಬದಲಾವಣೆ: ಖರೀದಿದಾರರು ತಿಳಿದಿರಬೇಕಾದ 6 ವಿಷಯಗಳುಮೇಕೆದಾಟು ವಿಚಾರದಲ್ಲಿ ಸಿಎಂ ವಿಜಯ್‌ಗೆ ಡಿಎಂಕೆ ಟಾಂಗ್ಸಿಜೆಐ ವಿರುದ್ಧ ಅಸಹ್ಯಕರ ಹೇಳಿಕೆ