ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ನಾಲ್ಕನೇ ಆವೃತ್ತಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ಮಾಲೀಕತ್ವದ ಬೆಂಗಳೂರು ಸ್ಟ್ರೈಕರ್ಸ್ ತಂಡ ಭರ್ಜರಿ ಸಿದ್ಧತೆ ನಡೆಸಿದೆ. ಆಟಗಾರರ ಹರಾಜು ಪ್ರಕ್ರಿಯೆಯ ಬಳಿಕ ಫ್ರಾಂಚೈಸಿಯು 18 ಸದಸ್ಯರ ನೂತನ ಹಾಗೂ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು, ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಗುರಿ ಹೊಂದಿದೆ.
ಹರಾಜಿನಲ್ಲಿ ಯೋಗೇಶ್ ಪೆನ್ಕರ್ ಮತ್ತು ಸುಮೀತ್ ಧೆಕಾಲೆ ಅವರಂತಹ ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ಎಲ್ಲಾ ವಿಭಾಗಗಳಲ್ಲೂ ಸಮತೋಲನ ಕಾಯ್ದುಕೊಳ್ಳಲಾಗಿದೆ. ಇವರೊಂದಿಗೆ ಗೌರೇಶ್ ನಾಗ್ವೇಕರ್, ಫಿರೋಜ್ ನಿಜಾಮುದ್ದೀನ್ ಶೇಖ್, ಜೈದ್ ಖಾನ್, ಜಿಗ್ನೇಶ್ ಪಟೇಲ್ ಮತ್ತು ಮಯೂರ್ ವಾಘ್ಮಾರೆ ತಂಡದಲ್ಲಿದ್ದು, ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್‌ರೌಂಡರ್ ವಿಭಾಗಗಳಿಗೆ ಹೆಚ್ಚಿನ ಬಲ ತುಂಬಿದ್ದಾರೆ. ಕಳೆದ ಆವೃತ್ತಿಯಲ್ಲಿ ಅಗ್ರ ಐದು ತಂಡಗಳಲ್ಲಿ ಸ್ಥಾನ ಪಡೆದಿದ್ದ ಬೆಂಗಳೂರು ಸ್ಟ್ರೈಕರ್ಸ್, ಈ ಬಾರಿ ಪ್ರಶಸ್ತಿ ಗೆಲ್ಲುವ ಛಲದೊಂದಿಗೆ ಕಣಕ್ಕಿಳಿಯುತ್ತಿದೆ.
ತಂಡದ ಸಿದ್ಧತೆ ಮತ್ತು ನಿರೀಕ್ಷೆಗಳ ಬಗ್ಗೆ ಮಾತನಾಡಿರುವ ಮಾಲೀಕ ಹೃತಿಕ್ ರೋಷನ್, ಹೊಸ ಆವೃತ್ತಿ ಮತ್ತು ನಮ್ಮ ತಂಡದ ಸಾಮರ್ಥ್ಯದ ಬಗ್ಗೆ ನನಗೆ ಅಪಾರ ಉತ್ಸಾಹವಿದೆ ಎಂದಿದ್ದಾರೆ. ತಂಡದಲ್ಲಿ ಉತ್ತಮ ಆಟಗಾರರ ಸಂಯೋಜನೆಯಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶ ನಮಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೂಕ್ತ ವೇದಿಕೆ ಸಿಗದ ದೇಶದ ಪ್ರತಿಭಾವಂತ ಆಟಗಾರರಿಗೆ ಇಂತಹ ಲೀಗ್‌ಗಳು ದೊಡ್ಡ ಮಟ್ಟದಲ್ಲಿ ಬೆಳೆಯಲು ಮತ್ತು ಭಾರತೀಯ ಕ್ರಿಕೆಟ್‌ಗೆ ಕೊಡುಗೆ ನೀಡಲು ನೆರವಾಗಲಿವೆ ಎಂದು ಹೃತಿಕ್ ಅಭಿಪ್ರಾಯಪಟ್ಟಿದ್ದಾರೆ.
ಡಿಸೆಂಬರ್ 6ರಿಂದ ಗೋವಾದ ವರ್ಣಾದಲ್ಲಿರುವ 1919 ಸ್ಪೋರ್ಟ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಎಸ್‌ಪಿಎಲ್ ನಾಲ್ಕನೇ ಆವೃತ್ತಿಯ ಪಂದ್ಯಗಳು ಆರಂಭವಾಗಲಿವೆ.