ಝಾನ್ಸಿ: ಸಾಮಾನ್ಯವಾಗಿ ಹ್ಯಾಂಡ್‌ಪಂಪ್ ಒತ್ತಿದರೆ ನೀರು ಬರುವುದು ಸಹಜ. ಆದರೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಹ್ಯಾಂಡ್‌ಪಂಪ್ ಒತ್ತಿದಾಗ ನೀರಿನ ಬದಲು ಕಚ್ಚಾ ಮದ್ಯ ಹೊರಬಂದಿದೆ. ಅಕ್ರಮ ಮದ್ಯ ದಂಧೆಕೋರರು ಯಾರಿಗೂ ಅನುಮಾನ ಬಾರದಂತೆ ಭೂಮಿಯೊಳಗೆ ಮದ್ಯದ ಟ್ಯಾಂಕ್ ನಿರ್ಮಿಸಿ, ಅದಕ್ಕೆ ಹ್ಯಾಂಡ್‌ಪಂಪ್ ಸಂಪರ್ಕ ಕಲ್ಪಿಸಿದ್ದರು ಎನ್ನಲಾಗಿದೆ. ಈ ವಿಚಿತ್ರ ವ್ಯವಸ್ಥೆಯನ್ನು ಕಂಡು ದಾಳಿ ನಡೆಸಿದ ಪೊಲೀಸರೇ ಅಚ್ಚರಿಗೊಳಗಾಗಿದ್ದಾರೆ.
ಅಷ್ಟಕ್ಕೂ ನಡೆದಿದ್ದೇನು?
ಝಾನ್ಸಿಯ ಸಕ್ರಾರ್ ಪೊಲೀಸ್ ಠಾಣೆ ವ್ಯಾಪ್ತಿಯ ತೇಜ್‌ಪುರ ಘುರಾಟ್ ಗ್ರಾಮದಲ್ಲಿ ಅಕ್ರಮವಾಗಿ ದೇಶಿ ಮದ್ಯ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 21ರಂದು ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿದರು.
ಮನೆಯ ಆವರಣದಲ್ಲಿ ಪರಿಶೀಲನೆ ನಡೆಸಿದರೂ ಆರಂಭದಲ್ಲಿ ಅಧಿಕಾರಿಗಳಿಗೆ ಮದ್ಯದ ಸಂಗ್ರಹ ಪತ್ತೆಯಾಗಿರಲಿಲ್ಲ. ಈ ವೇಳೆ ಮನೆಯ ಅಂಗಳದಲ್ಲಿದ್ದ ಹ್ಯಾಂಡ್‌ಪಂಪ್ ಮೇಲೆ ಅನುಮಾನ ವ್ಯಕ್ತವಾಗಿದೆ. ಅದನ್ನು ಚಾಲನೆ ಮಾಡಿದಾಗ ನೀರಿನ ಬದಲು ಕಚ್ಚಾ ಮದ್ಯ ಹೊರಬರಲು ಆರಂಭಿಸಿದೆ. ಇದನ್ನು ಕಂಡ ಅಧಿಕಾರಿಗಳು ಒಂದು ಕ್ಷಣ ದಂಗಾಗಿದ್ದಾರೆ.
ಭೂಮಿಯೊಳಗೆ ನಿರ್ಮಿಸಲಾಗಿತ್ತು ಮದ್ಯದ ಟ್ಯಾಂಕ್
ಹೆಚ್ಚಿನ ಪರಿಶೀಲನೆ ನಡೆಸಿದಾಗ ಹ್ಯಾಂಡ್‌ಪಂಪ್‌ನ ಕೆಳಭಾಗದಲ್ಲಿ ಭೂಮಿಯೊಳಗೆ ಟ್ಯಾಂಕ್ ನಿರ್ಮಿಸಿ ಅದರಲ್ಲಿ ಅಕ್ರಮ ಮದ್ಯ ಸಂಗ್ರಹಿಸಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ. ಟ್ಯಾಂಕ್‌ಗೆ ಪೈಪ್‌ಗಳ ಮೂಲಕ ಸಂಪರ್ಕ ಕಲ್ಪಿಸಿ, ಮೇಲ್ಭಾಗದಲ್ಲಿ ಸಾಮಾನ್ಯ ನೀರಿನ ಹ್ಯಾಂಡ್‌ಪಂಪ್‌ನಂತೆ ಕಾಣುವ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ.
ಈ ಮೂಲಕ ಹೊರನೋಟಕ್ಕೆ ನೀರಿನ ಪಂಪ್‌ನಂತೆ ಕಾಣುತ್ತಿದ್ದ ಹ್ಯಾಂಡ್‌ಪಂಪ್ ಬಳಸಿ ಭೂಮಿಯೊಳಗೆ ಸಂಗ್ರಹಿಸಿದ್ದ ಮದ್ಯವನ್ನು ಹೊರತೆಗೆಯಲಾಗುತ್ತಿತ್ತು. ಅಕ್ರಮ ದಂಧೆ ಯಾರ ಗಮನಕ್ಕೂ ಬರದಂತೆ ಮದ್ಯ ಸಂಗ್ರಹಿಸಲು ಈ ತಂತ್ರ ಬಳಸಲಾಗಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಈ ಕಾರ್ಯಾಚರಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಪೊಲೀಸರು ಹ್ಯಾಂಡ್‌ಪಂಪ್ ಚಾಲನೆ ಮಾಡುತ್ತಿರುವುದು, ಅದರಿಂದ ಹೊರಬಂದ ದ್ರವವನ್ನು ಪಾತ್ರೆಯಲ್ಲಿ ಸಂಗ್ರಹಿಸಿ ಬಳಿಕ ಜೆರಿಕ್ಯಾನ್‌ಗೆ ತುಂಬಿಸುತ್ತಿರುವ ದೃಶ್ಯಗಳಿವೆ.
https://x.com/sirajnoorani/status/2124632635783987332?s=20
30 ಲೀಟರ್ ಅಕ್ರಮ ಮದ್ಯ ವಶ, 1,000 ಲೀಟರ್ ಲಹಾನ್ ನಾಶ
ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿಯಲ್ಲಿ ಸುಮಾರು 30 ಲೀಟರ್ ಸಿದ್ಧಪಡಿಸಿದ ಅಕ್ರಮ ಕಚ್ಚಾ ದೇಶಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ಮದ್ಯ ತಯಾರಿಕೆಗೆ ಬಳಸುವ ಹುದುಗಿಸಿದ ಕಚ್ಚಾ ಪದಾರ್ಥವಾದ ಸುಮಾರು 1,000 ಲೀಟರ್ ಲಹಾನ್ ಅನ್ನು ಪತ್ತೆಹಚ್ಚಿ ಸ್ಥಳದಲ್ಲೇ ನಾಶಪಡಿಸಲಾಗಿದೆ.
ಈ ಕಾರ್ಯಾಚರಣೆಯ ವೇಳೆ ತೇಜ್‌ಪುರ ಘುರಾಟ್ ಗ್ರಾಮದ 30 ವರ್ಷದ ವಿನೀತಾ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ವಿರುದ್ಧ ಅಬಕಾರಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಅಕ್ರಮ ಮದ್ಯ ತಯಾರಿಕೆ ಮತ್ತು ಸಂಗ್ರಹಣೆಯ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.