ಮೀರತ್: ಪಾಕಿಸ್ತಾನಿ ಹ್ಯಾಂಡ್ಲರ್ ಜೊತೆ ಸಂಪರ್ಕ ಹೊಂದಿದ ಆರೋಪದಲ್ಲಿ ಉತ್ತರ ಪ್ರದೇಸದ ಮೀರತ್ ನಲ್ಲಿ ಯುವಕನೊಬ್ಬನನ್ನು ವಿಶೇಷ ಕಾರ್ಯಪಡೆ ಬಂಧಿಸಿದೆ.
ಪಾಕಿಸ್ತಾನ ಹ್ಯಾಂಡ್ಲರ್ ಶಹಜಾದ್ ಭಟ್ಟಿ ಜಾಲದೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಮೀರತ್‌ನಲ್ಲಿ ಉಜೈದ್ ಎಂಬ ಯುವಕನನ್ನು ವಿಶೇಷ ಕಾರ್ಯಪಡೆ ಬಂಧಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧನಕ್ಕೊಳಗಾಗಿರುವ ಮೊಹಮ್ಮದ್ ಸಾಜಿದ್ ಜೊತೆ ಉಜೈದ್ ಸಂಪರ್ಕ ಹೊಂದಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮೀರತ್‌ನ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬನಿಯಾಪಾಡಾ ನಿವಾಸಿಯಾಗಿರುವ ಉಜೈದ್ ಕಳೆದ ಕೆಲವು ತಿಂಗಳುಗಳಿಂದ ಮೊಹಮ್ಮದ್ ಸಾಜಿದ್ ಜೊತೆ ಆನ್‌ಲೈನ್ ಮೂಲಕ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಇಬ್ಬರ ನಡುವೆ ಸಾಮಾಜಿಕ ಜಾಲತಾಣಗಳ ಮೂಲಕ ಮಾತುಕತೆ ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಹ್ಯಾಂಡ್ಲರ್ ಶಹಜಾದ್ ಭಟ್ಟಿ ಜಾಲದೊಂದಿಗೂ ಉಜೈದ್ ಸಂಪರ್ಕ ಹೊಂದಿದ್ದಾನೆಯೇ ಎಂಬ ಬಗ್ಗೆ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ.
ಕಾಶ್ಮೀರ ಪೊಲೀಸರು ಕಳೆದ ಸುಮಾರು ಹತ್ತು ತಿಂಗಳಿಂದ ಉಜೈದ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆತನನ್ನು ಬಂಧಿಸಲು ಮೀರತ್‌ಗೆ ಬಂದಿದ್ದರೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡಿದ್ದ. ಬಳಿಕ ತನ್ನ ವಾಸಸ್ಥಳವನ್ನು ಬದಲಾಯಿಸುತ್ತಾ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ಉಜೈದ್ ಬಂಧನದ ಬಳಿಕ ಆತನ ಕುಟುಂಬದ ಮನೆಯ ಬಾಗಿಲಿಗೆ ಬೀಗ ಹಾಕಿರುವುದು ಕಂಡುಬಂದಿದೆ. ಕುಟುಂಬದ ಸದಸ್ಯರು ಮನೆ ತೊರೆದು ತೆರಳಿದ್ದಾರೆ ಎಂದು ವರದಿಯಾಗಿದೆ.
ಶಹಜಾದ್ ಭಟ್ಟಿ ಜಾಲದೊಂದಿಗೆ ಉಜೈದ್ ನೇರ ಸಂಪರ್ಕ ಹೊಂದಿದ್ದಾನೆಯೇ ಅಥವಾ ಮಧ್ಯವರ್ತಿಗಳ ಮೂಲಕ ಸಂಪರ್ಕದಲ್ಲಿದ್ದಾನೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ.