ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಕೋ ಫೌಂಡರ್ ಸೌರವ್ ದಾಸ್ ಅವರಿಗೆ ದೆಹಲಿ ಪೊಲೀಸರು ದೆಹಲಿ ಏರ್ ಪೋರ್ಟ್ ನಲ್ಲಿ ಶಾಕ್ ನೀಡಿದ್ದಾರೆ.
ಬ್ರಿಟನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ಸೌರವ್ ದಾಸ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲೇ ತಡೆಯಲಾಗಿದೆ. ಅವರ ಪಾಸ್‌ಪೋರ್ಟ್‌ನಲ್ಲಿ ಜನ್ಮಸ್ಥಳದ ಮಾಹಿತಿ ತಪ್ಪಾಗಿ ನಮೂದಾಗಿರುವುದೇ ಈ ಕ್ರಮಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.
ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (LSE) ಮತ್ತು ಎಡಿನ್‌ಬರ್ಗ್ ವಿಶ್ವವಿದ್ಯಾಲಯಗಳಲ್ಲಿ ‘ಕಾಕ್ರೋಚ್ ಚಳವಳಿ’ ಕುರಿತು ಉಪನ್ಯಾಸ ನೀಡಲು ತಾವು ತೆರಳುತ್ತಿರುವುದಾಗಿ ಸೌರವ್ ದಾಸ್ ಹೇಳಿಕೊಂಡಿದ್ದರು. ಆದರೆ, ದೆಹಲಿ ವಿಮಾನ ನಿಲ್ದಾಣದ ಇಮಿಗ್ರೇಷನ್ (ವಲಸೆ) ತಪಾಸಣೆಯ ವೇಳೆ ಅವರ ಪಾಸ್‌ಪೋರ್ಟ್‌ಗೆ ತಡೆ ನೀಡಿರುವುದು ತಿಳಿದುಬಂದಿದ್ದು, ಅವರನ್ನು ವಿಮಾನ ಹತ್ತದಂತೆ ತಡೆಯಲಾಗಿದೆ.
ಮೂಲಗಳ ಪ್ರಕಾರ, 2019ರ ಆಗಸ್ಟ್ 21ರಂದು ಚೆನ್ನೈ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ವಿತರಿಸಲಾದ ಸೌರವ್ ದಾಸ್ ಅವರ ಪಾಸ್‌ಪೋರ್ಟ್‌ನಲ್ಲಿ ಜನ್ಮಸ್ಥಳವನ್ನು ‘ಚೆನ್ನೈ’ ಎಂದು ತಪ್ಪಾಗಿ ನಮೂದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ಅವರ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದೆ. ಅಲ್ಲದೆ, ಅವರು ಲಂಡನ್‌ಗೆ ಹೊರಡಬೇಕಿದ್ದ ನವೆಂಬರ್ 23ರಂದೇ ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಏಳು ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚಿಸಲಾಗಿದ್ದು, ಅಲ್ಲಿಯವರೆಗೆ ಈ ಪಾಸ್‌ಪೋರ್ಟ್ ಬಳಸಿ ಯಾವುದೇ ಪ್ರಯಾಣ ಮಾಡದಂತೆ ನಿರ್ದೇಶನ ನೀಡಲಾಗಿದೆ.
ತಮ್ಮ ಪ್ರಯಾಣಕ್ಕೆ ತಡೆಯೊಡ್ಡಿದ ಬೆನ್ನಲ್ಲೇ ದೆಹಲಿ ವಿಮಾನ ನಿಲ್ದಾಣದಿಂದ ವಿಡಿಯೋ ಹಂಚಿಕೊಂಡಿರುವ ಸೌರವ್ ದಾಸ್, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಸ್ಟೂಡೆಂಟ್ಸ್ ಯೂನಿಯನ್‌ನಿಂದ ನನಗೆ ಆಹ್ವಾನವಿತ್ತು. ಆದರೆ ಇಮಿಗ್ರೇಷನ್ ತಪಾಸಣೆಗೆ ಹೋದ ತಕ್ಷಣ ನನ್ನ ಪಾಸ್‌ಪೋರ್ಟ್ ತಡೆಹಿಡಿಯಲಾಗಿದೆ ಎಂದು ತಿಳಿಯಿತು. ವಿದ್ಯಾವಂತ ಯುವಕನೊಬ್ಬ ವಿದ್ಯಾವಂತರ ನಡುವೆ ಹೋಗಿ ಬೌದ್ಧಿಕ ಚರ್ಚೆ ನಡೆಸುವುದಕ್ಕೆ ಸರ್ಕಾರಕ್ಕೆ ಏಕಿಷ್ಟು ಭಯ ಎಂದು ಪ್ರಶ್ನಿಸಿದ್ದಾರೆ.
ನಾನು ನೀರವ್ ಮೋದಿ ಆಗಿರಬೇಕಿತ್ತು, ವಿಜಯ್ ಮಲ್ಯ ಆಗಿರಬೇಕಿತ್ತು, ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿರಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಇದಕ್ಕೆಲ್ಲಾ ಎದೆಗುಂದುವುದಿಲ್ಲ, ಭವಿಷ್ಯದಲ್ಲಿ ಖಂಡಿತವಾಗಿಯೂ ಲಂಡನ್, ಪ್ಯಾರಿಸ್‌ಗೆ ಪ್ರಯಾಣಿಸುತ್ತೇನೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಮ್ಮೇಳನದಲ್ಲಿ ಮಾತನಾಡಲು ಸೌರವ್‌ಗೆ ಆಹ್ವಾನ ಬಂದಿತ್ತು. ಆದರೆ, ಸ್ವತಃ ಪ್ರಪಂಚ ಸುತ್ತಲು ಇಷ್ಟಪಡುವ ಅಧಿಕಾರದಲ್ಲಿರುವ ಕೆಲವು ಅನಕ್ಷರಸ್ಥರಿಗೆ ಆಕ್ಸ್‌ಫರ್ಡ್‌ನಿಂದ ಸೌರವ್‌ಗೆ ಆಹ್ವಾನ ಬಂದಿರುವುದನ್ನು ಕಂಡು ಹೊಟ್ಟೆಕಿಚ್ಚಾಗಿದೆ ಕಿಡಿಕಾರಿದ್ದಾರೆ. ಈ ಬೆಳವಣಿಗೆಗಳ ಕುರಿತು ಸೌರವ್ ದಾಸ್ ಅವರಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.