ಸೆಂಚುರಿಯನ್ನ ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯವು ಆತಿಥೇಯರ ಭರ್ಜರಿ ಗೆಲುವಿನೊಂದಿಗೆ ಅಂತ್ಯಗೊಂಡಿದೆ. ಆದರೆ ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚಾಗಿ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ವಿಯಾನ್ ಮುಲ್ಡರ್ ಮತ್ತು ಬಾಂಗ್ಲಾದೇಶದ ವೇಗಿ ತಸ್ಕಿನ್ ಅಹ್ಮದ್ ನಡುವಿನ ವಾಗ್ವಾದವೇ ಈಗ ಕ್ರಿಕೆಟ್ ವಲಯದಲ್ಲಿ ದೊಡ್ಡ ಸುದ್ದಿಯಾಗಿದೆ.
ಬಾಂಗ್ಲಾದೇಶದ ಎರಡನೇ ಇನ್ನಿಂಗ್ಸ್ನ ಅಂತಿಮ ಹಂತದಲ್ಲಿ ಬ್ಯಾಟಿಂಗ್ಗೆ ಇಳಿದ ತಸ್ಕಿನ್ ಅಹ್ಮದ್, ಮುಲ್ಡರ್ ಎಸೆತಗಳಲ್ಲಿ ಸತತ ಎರಡು ಬೌಂಡರಿ ಬಾರಿಸಿ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಕೇವಲ ಏಳು ಎಸೆತಗಳಲ್ಲಿ ಹತ್ತು ರನ್ ಗಳಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ತಸ್ಕಿನ್ ಅವರನ್ನು ಮುಲ್ಡರ್ ಅದ್ಭುತ ಎಸೆತದ ಮೂಲಕ ಕ್ಲೀನ್ ಬೌಲ್ಡ್ ಮಾಡಿದರು. ವಿಕೆಟ್ ಕಳೆದುಕೊಂಡ ನಿರಾಸೆಯಲ್ಲಿದ್ದ ತಸ್ಕಿನ್ ಮತ್ತು ಸಂಭ್ರಮದಲ್ಲಿದ್ದ ಮುಲ್ಡರ್ ನಡುವೆ ಮೈದಾನದಲ್ಲೇ ಬಿಸಿಬಿಸಿ ಮಾತಿನ ಚಕಮಕಿ ನಡೆಯಿತು.
ಈ ಘಟನೆಯ ಬಿಸಿ ಪಂದ್ಯ ಮುಗಿದ ಬಳಿಕವೂ ತಣ್ಣಗಾದಂತೆ ಕಾಣಲಿಲ್ಲ. ಬಾಂಗ್ಲಾದೇಶದ ಅಂತಿಮ ವಿಕೆಟ್ ಪತನದ ನಂತರ ಉಭಯ ತಂಡಗಳ ಆಟಗಾರರು ಸಂಪ್ರದಾಯದಂತೆ ಪರಸ್ಪರ ಹಸ್ತಲಾಘವ ಮಾಡುತ್ತಿದ್ದಾಗ, ಮುಲ್ಡರ್ ಮತ್ತು ತಸ್ಕಿನ್ ಮುಖಾಮುಖಿಯಾದರೂ ಕೈಕುಲುಕದೆ ಮುಂದೆ ಸಾಗಿದರು. ಇಬ್ಬರ ನಡುವಿನ ಈ ಅಂತರ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದು, ಪಂದ್ಯದ ನಡುವೆ ನಡೆದ ಜಗಳವೇ ಇದಕ್ಕೆ ಕಾರಣವಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ವಿಯಾನ್ ಮುಲ್ಡರ್ ಅವರ ಅಮೋಘ ಆಲ್ರೌಂಡ್ ಪ್ರದರ್ಶನದ ಬಲದಿಂದ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಹಾಗೂ 219 ರನ್ಗಳ ಬೃಹತ್ ಜಯ ಸಾಧಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಮುಲ್ಡರ್, ಬೌಲಿಂಗ್ನಲ್ಲೂ ಕಮಾಲ್ ಮಾಡಿ ಕೇವಲ 31 ರನ್ ನೀಡಿ ಏಳು ವಿಕೆಟ್ ಕಬಳಿಸುವ ಮೂಲಕ ತಮ್ಮ ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದರು. ಮುಲ್ಡರ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ನಲ್ಲಿ 184 ರನ್ಗಳಿಗೆ ಆಲೌಟ್ ಆಗುವುದರೊಂದಿಗೆ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಕೈಚೆಲ್ಲಿದೆ.