ಐಪಿಎಲ್ 2027 ರ ಹರಾಜಿಗೂ ಮುನ್ನ ನಡೆದ ಆಟಗಾರರ ಟ್ರೇಡ್ ಪ್ರಕ್ರಿಯೆಯಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡಿರುವುದು ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಆದರೆ ಪಂಜಾಬ್ ಪಾಲಾಗುವ ಮೊದಲು ಹಾರ್ದಿಕ್ ಪಾಂಡ್ಯ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರುವುದು ಬಹುತೇಕ ಖಚಿತವಾಗಿತ್ತು ಎಂಬ ಅಚ್ಚರಿಯ ಸಂಗತಿ ಈಗ ಬೆಳಕಿಗೆ ಬಂದಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಂದಿಟ್ಟ ಎರಡು ಕಠಿಣ ಬೇಡಿಕೆಗಳಿಂದಾಗಿ ಈ ಮೆಗಾ ಡೀಲ್ ಕೊನೆ ಕ್ಷಣದಲ್ಲಿ ಮುರಿದುಬಿದ್ದಿದೆ.
ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಕರೆತರಲು ರಾಜಸ್ಥಾನ್ ರಾಯಲ್ಸ್ ಮಾಲೀಕರು ಮತ್ತು ಕ್ರಿಕೆಟ್ ನಿರ್ದೇಶಕ ಕುಮಾರ್ ಸಂಗಕ್ಕಾರ ಬೆಂಗಳೂರಿಗೆ ಆಗಮಿಸಿ ಮುಂಬೈ ಇಂಡಿಯನ್ಸ್ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದರು. ಮಾತುಕತೆ ಅಂತಿಮ ಹಂತಕ್ಕೆ ತಲುಪಿದ್ದರೂ, ಪಾಂಡ್ಯ ಬದಲಿಗೆ ರಾಜಸ್ಥಾನ್ ತಂಡದ ಇಬ್ಬರು ಪ್ರಮುಖ ಆಟಗಾರರಾದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು ಬಿಟ್ಟುಕೊಡುವಂತೆ ಮುಂಬೈ ಪಟ್ಟು ಹಿಡಿದಿತ್ತು. ತಮ್ಮ ತಂಡದ ಎರಡು ಪ್ರಮುಖ ಆಧಾರಸ್ತಂಭಗಳನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ರಾಜಸ್ಥಾನ್ ರಾಯಲ್ಸ್ ಈ ಪ್ರಸ್ತಾಪವನ್ನು ತಿರಸ್ಕರಿಸಿ ಮಾತುಕತೆಯಿಂದ ಹಿಂದೆ ಸರಿಯಿತು.
ಈ ಒಪ್ಪಂದ ಯಶಸ್ವಿಯಾಗಿದ್ದರೆ ರಿಯಾನ್ ಪರಾಗ್ ಬದಲಿಗೆ ಅನುಭವಿ ನಾಯಕನ ಹುಡುಕಾಟದಲ್ಲಿದ್ದ ರಾಜಸ್ಥಾನ್ ತಂಡಕ್ಕೆ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದ ಹಾರ್ದಿಕ್ ಪಾಂಡ್ಯ ರೂಪದಲ್ಲಿ ಸಮರ್ಥ ನಾಯಕ ಸಿಗುತ್ತಿದ್ದರು. ಆದರೆ ರಾಜಸ್ಥಾನ್ ಹಿಂದೆ ಸರಿದ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ಮಧ್ಯಪ್ರವೇಶಿಸಿ, ತನ್ನ ಪ್ರಮುಖ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು 18 ಕೋಟಿ ರೂಪಾಯಿ ಮೊತ್ತಕ್ಕೆ ಮುಂಬೈಗೆ ನೀಡಿ, 18 ಕೋಟಿ ರೂಪಾಯಿ ಮೌಲ್ಯದೊಂದಿಗೆ ಹಾರ್ದಿಕ್ ಪಾಂಡ್ಯ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಮುಂಬೈ ಇಂಡಿಯನ್ಸ್ ಪರ ನಾಲ್ಕು ಬಾರಿ ಟ್ರೋಫಿ ಗೆದ್ದಿದ್ದ ಪಾಂಡ್ಯ ಅವರ ಎರಡನೇ ಇನ್ನಿಂಗ್ಸ್ ಅಂತ್ಯಗೊಂಡಂತಾಗಿದೆ.