ದೋಹಾ: ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎ ತಂಡದ ಉಪನಾಯಕ ರಿಂಕು ಸಿಂಗ್ ಅವರ ವಿಕೆಟ್ ಪತನ ತೀವ್ರ ವಿವಾದಕ್ಕೆ ಕಾರಣವಾಗಿದೆ. ಗುರುವಾರ ಶ್ರೀಲಂಕಾ ಎ ವಿರುದ್ಧ ನಡೆದ ಈ ಪಂದ್ಯದಲ್ಲಿ ಫೀಲ್ಡ್ ಅಂಪೈರ್ ನೀಡಿದ ತಪ್ಪು ನಿರ್ಧಾರಕ್ಕೆ ರಿಂಕು ಸಿಂಗ್ ಮೈದಾನದಲ್ಲೇ ತಮ್ಮ ಅಸಮಾಧಾನ ಹೊರಹಾಕಿದರು.
ಭಾರತದ ಇನ್ನಿಂಗ್ಸ್‌ನ 37ನೇ ಓವರ್‌ನಲ್ಲಿ ಶ್ರೀಲಂಕಾ ಸ್ಪಿನ್ನರ್ ರವೀಂದು ಫರ್ನಾಂಡೋ ಎಸೆದ ಚೆಂಡನ್ನು ಲೆಗ್ ಸೈಡ್‌ನತ್ತ ಬಾರಿಸಲು ರಿಂಕು ಸಿಂಗ್ ಯತ್ನಿಸಿದರು. ಈ ವೇಳೆ ಚೆಂಡು ಪ್ಯಾಡ್‌ಗೆ ಬಡಿಯುತ್ತಿದ್ದಂತೆಯೇ ಲಂಕಾ ಆಟಗಾರರು ಬಲವಾಗಿ ಮನವಿ ಮಾಡಿದರು. ಅಂಪೈರ್ ಯಾವುದೇ ಹಿಂಜರಿಕೆಯಿಲ್ಲದೆ ತಕ್ಷಣವೇ ಔಟ್ ಎಂದು ತೀರ್ಪು ನೀಡಿದರು.
ಅಂಪೈರ್ ನಿರ್ಧಾರದಿಂದ ಆಘಾತಕ್ಕೊಳಗಾದ ರಿಂಕು ಸಿಂಗ್, ಚೆಂಡು ಪ್ಯಾಡ್‌ಗೆ ಬಡಿಯುವ ಮುನ್ನ ಬ್ಯಾಟ್‌ನ ಒಳಭಾಗಕ್ಕೆ ತಗುಲಿದೆ ಎಂದು ತಮ್ಮ ಬ್ಯಾಟ್ ತೋರಿಸುತ್ತಾ ಅಂಪೈರ್‌ಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ ಅಂಪೈರ್ ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ. ಈ ಟೂರ್ನಿಯಲ್ಲಿ ಡಿಆರ್‌ಎಸ್ ಸೌಲಭ್ಯ ಇಲ್ಲದ ಕಾರಣ, ರಿಂಕು ಸಿಂಗ್ ಅವರಿಗೆ ಅಂಪೈರ್ ತೀರ್ಪನ್ನು ಪ್ರಶ್ನಿಸುವ ಅವಕಾಶ ಸಿಗದೆ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಬೇಕಾಯಿತು.
ಬಳಿಕ ಟಿವಿ ರೀಪ್ಲೇಗಳನ್ನು ಪರಿಶೀಲಿಸಿದಾಗ ಚೆಂಡು ಸ್ಪಷ್ಟವಾಗಿ ಬ್ಯಾಟ್‌ಗೆ ತಗುಲಿ ಪ್ಯಾಡ್‌ಗೆ ಬಡಿದಿರುವುದು ಹಾಗೂ ಲೆಗ್ ಸ್ಟಂಪ್‌ನಿಂದ ಹೊರಹೋಗುತ್ತಿರುವುದು ಕಂಡುಬಂದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ತಿಲಕ್ ವರ್ಮಾ ಮತ್ತು ಕುಮಾರ್ ಕುಶಾಗ್ರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ಎ ತಂಡಕ್ಕೆ ರಿಂಕು ಸಿಂಗ್ ಅವರ 12 ರನ್‌ಗಳ ನಿರ್ಗಮನ ದೊಡ್ಡ ಹೊಡೆತ ನೀಡಿತು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 317 ರನ್ ಪೇರಿಸಿತು. ಆದರೆ ಸಿನೆತ್ ಜಯವರ್ಧನೆ ಅವರ 105 ರನ್ ಹಾಗೂ ಲಸಿತ್ ಕ್ರೂಸ್ಪುಲ್ಲೆ ಅವರ 116 ರನ್‌ಗಳ ಭರ್ಜರಿ ಶತಕದ ನೆರವಿನಿಂದ ಶ್ರೀಲಂಕಾ ಎ ತಂಡ ಕೇವಲ 41.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿ ಫೈನಲ್‌ಗೆ ಪ್ರವೇಶಿಸಿತು.