ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವಹಿವಾಟುಗಳಿಗೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಮಹತ್ವದ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಇವು ಅಕ್ಟೋಬರ್ 15 ರಿಂದ ಜಾರಿಗೆ ಬರಲಿವೆ. ರೂ. 2,000 ವರೆಗಿನ ಯುಪಿಐ ವಹಿವಾಟುಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ ಎಂದು ಎನ್‌ಪಿಸಿಐ ಸ್ಪಷ್ಟಪಡಿಸಿದೆ.
ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ: ಸಣ್ಣ ವ್ಯಾಪಾರಿಗಳಿಗೆ ರೂ. 1 ಲಕ್ಷದವರೆಗಿನ ವಹಿವಾಟು ಉಚಿತವಾಗಿದ್ದು, ನಂತರದ ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಗರಿಷ್ಠ ರೂ. 300 ರವರೆಗೆ ಶುಲ್ಕ ವಿಧಿಸಲಾಗುತ್ತದೆ.
ಶೇ. 95 ರಷ್ಟು ವಹಿವಾಟು ಸಂಪೂರ್ಣ ಉಚಿತ: ಒಟ್ಟು ಯುಪಿಐ (P2M) ವಹಿವಾಟುಗಳಲ್ಲಿ ಶೇಕಡಾ 95 ರಷ್ಟು ರೂ. 2,000 ಕ್ಕಿಂತ ಕಡಿಮೆ ಇರುವುದರಿಂದ, ಸಾಮಾನ್ಯ ಗ್ರಾಹಕರು ಹಾಗೂ ಸಣ್ಣ ವರ್ತಕರಿಗೆ ಯಾವುದೇ ಹೊರೆಯಾಗುವುದಿಲ್ಲ.
ವಿಶೇಷ ವಲಯಗಳ ನಿಯಮ: ರೈಲ್ವೆ ಹಾಗೂ ಇಂಧನ (ಪೆಟ್ರೋಲ್/ಡೀಸೆಲ್) ವಲಯಗಳಲ್ಲಿ ರೂ. 2,000 ದಾಟಿದರೆ ರೂ. 500 ಶುಲ್ಕ ಅನ್ವಯವಾಗಲಿದೆ.
ಷೇರು ಮತ್ತು ಮ್ಯೂಚುವಲ್ ಫಂಡ್ಸ್: ಮ್ಯೂಚುವಲ್ ಫಂಡ್‌ಗಳು, ಸೆಕ್ಯುರಿಟೀಸ್ ಮತ್ತು ಸ್ಟಾಕ್ ಬ್ರೋಕರ್‌ಗಳಿಗೆ ಶೇ. 0.02 ಎಂಡಿಆರ್ (MDR) ಅನ್ವಯವಾಗಲಿದ್ದು, ಗರಿಷ್ಠ ಮಿತಿ ರೂ. 300 ಆಗಿರಲಿದೆ.
ಹಿಡನ್ ಚಾರ್ಜ್‌ಗಳಿಗೆ ನಿಷೇಧ: ಯಾವುದೇ ಯುಪಿಐ ಆ್ಯಪ್‌ಗಳು ಬಳಕೆದಾರರಿಂದ ಪ್ಲಾಟ್‌ಫಾರ್ಮ್ ಶುಲ್ಕ ಅಥವಾ ಯಾವುದೇ ಗುಪ್ತ (ಹಿಡನ್) ಶುಲ್ಕಗಳನ್ನು ವಸೂಲಿ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ವಿಶೇಷ ನಿಧಿ ಸ್ಥಾಪನೆ: ಟೈರ್-3 ಹಾಗೂ ಗ್ರಾಮೀಣ ಭಾಗಗಳಲ್ಲಿ ಡಿಜಿಟಲ್ ಪಾವತಿ ಮೂಲಸೌಕರ್ಯ ಬಲಪಡಿಸಲು ಮತ್ತು ಸಣ್ಣ ವ್ಯಾಪಾರಿಗಳಿಗೆ ನೆರವಾಗಲು ಪ್ರತ್ಯೇಕ ನಿಧಿಯನ್ನು ರಚಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ರಾಜಕೀಯ ವಾಕ್ಸಮರ:
ಯುಪಿಐ ಮೇಲಿನ ಹೊಸ ನಿಯಮಗಳು ದೇಶದಲ್ಲಿ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿವೆ. ಎಂಡಿಆರ್ ಶುಲ್ಕ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಸಾರ್ವಜನಿಕರ ಮೇಲೆ ಭಾರಿ ಆರ್ಥಿಕ ಹೊರೆ ಹೇರಿದೆ ಎಂದು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವನ್ನು ಅಮೆರಿಕದ ಒತ್ತಡಕ್ಕೆ ಮಣಿದು ತೆಗೆದುಕೊಳ್ಳಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಆದರೆ ಈ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ಸಾಮಾನ್ಯ ಗ್ರಾಹಕರು ಮತ್ತು ಸಣ್ಣ ವರ್ತಕರ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ; ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿಗೆ ಹೋಲಿಸಿದರೆ ಯುಪಿಐ ದರಗಳು ಅತ್ಯಂತ ಕಡಿಮೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.