ತರೀಕೆರೆ: ಭದ್ರಾವತಿ ವಿಭಾಗಕ್ಕೆ ಒಳಪಡುವ ತರೀಕೆರೆ ವಲಯದ ಹುಣಸಘಟ್ಟ ಶಾಖೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮುಳ್ಳುಹಂದಿಗಳನ್ನು ಬೇಟೆಯಾಡಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಸಾವೆಮರಡಿ ಕಾವಲ್ ಗ್ರಾಮದ ನಿವಾಸಿ ಸುರೇಶ ಬಿನ್ ನಾಗರಾಜ ಎಂಬುವವರ ದನದ ಕೊಟ್ಟಿಗೆಯ ಮೇಲೆ ತರೀಕೆರೆ ವಲಯ ಅರಣ್ಯಾಧಿಕಾರಿ ಹರೀಶ್.ಕೆ.ಆರ್. ಅವರ ನೇತೃತ್ವದಲ್ಲಿ ಇಲಾಖೆ ಸಿಬ್ಬಂದಿ ದಿಢೀರ್ ದಾಳಿ ನಡೆಸಿದರು. ಈ ವೇಳೆ ಕೊಟ್ಟಿಗೆಯಲ್ಲಿ ಬಚ್ಚಿಡಲಾಗಿದ್ದ ಮೂರು ಮುಳ್ಳುಹಂದಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಮೂವರು ಆರೋಪಿಗಳ ವಿರುದ್ಧ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡಿರುವ ಅಧಿಕಾರಿಗಳು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಯಶಸ್ವಿ ದಾಳಿ ಕಾರ್ಯಾಚರಣೆಯಲ್ಲಿ ಹುಣಸಘಟ್ಟ ಉಪ ವಲಯ ಅರಣ್ಯಾಧಿಕಾರಿ ಉಮೇಶ್ ಕೆ., ಗಸ್ತು ಅರಣ್ಯ ಪಾಲಕರಾದ ಅನ್ನಪೂರ್ಣೇಶ್ವರಿ ಹೆಗ್ಗಡೆ, ಸುನೀಲ್ ಪೂಜಾರಿ ಹಾಗೂ ನೆಡುತೋಪು ಕಾವಲುಗಾರರಾದ ರಾಜು ಮತ್ತು ನಾಗರಾಜ ಅವರು ಉಪಸ್ಥಿತರಿದ್ದು ಭಾಗವಹಿಸಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..