ಬೆಂಗಳೂರು: ಪೊಲೀಸ್ ಪಡೆ ಎಂದರೆ ಸಾಮಾನ್ಯವಾಗಿ ನೆನಪಾಗುವುದು ಶಿಸ್ತು, ಕಾನೂನು ಮತ್ತು ಕಠಿಣ ಕ್ರಮಗಳು. ಆದರೆ ಅದೇ ಖಾಕಿ ಸಮವಸ್ತ್ರದೊಳಗೆ ಮೃದು ಹಾಗೂ ಮಾನವೀಯ ಹೃದಯವೂ ಮಿಡಿಯುತ್ತದೆ ಎಂಬುದಕ್ಕೆ ಹಿರಿಯ ಕೆಎಸ್‌ಪಿಎಸ್ ಅಧಿಕಾರಿ ರೀನಾ ಸುವರ್ಣ ಅವರ ಸೇವಾ ಪಯಣ ಅತ್ಯುತ್ತಮ ಉದಾಹರಣೆಯಾಗಿದೆ.
ಕಳ್ಳರ ಬೆನ್ನಟ್ಟುವುದು, ರೌಡಿಗಳ ಚಟುವಟಿಕೆಗೆ ತಡೆ ಒಡ್ಡುವುದು ಹಾಗೂ ಮಾದಕ ವಸ್ತುಗಳ ಜಾಲವನ್ನು ಮೆಟ್ಟಿಹಾಕುವುದರಲ್ಲಿ ನಿಷ್ಠುರತೆ ತೋರುವ ಇವರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಮುಂದೆ ನಿಂತಾಗ ಪ್ರೀತಿಯ ಶಿಕ್ಷಕಿಯಾಗಿ ಬದಲಾಗುತ್ತಾರೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಯುವಜನತೆಗೆ ಬದುಕಿನ ದಾರಿದೀಪವಾಗುತ್ತಿರುವ ಇವರ ಅಪರೂಪದ ವ್ಯಕ್ತಿತ್ವವನ್ನು ಸ್ಮರಿಸುವುದು ನಿಜಕ್ಕೂ ಅರ್ಥಪೂರ್ಣವಾಗಿದೆ.
'ಕೇಸ್‌ಗಳ ಕಥೆ'ಗಳ ಮೂಲಕ ಯುವಜನತೆಗೆ ಜಾಗೃತಿ
ಅಪರಾಧ ಲೋಕಕ್ಕೆ ಕಾಲಿಟ್ಟು ಬದುಕು ಹಾಳುಮಾಡಿಕೊಂಡವರ, ಮಾದಕ ವ್ಯಸನಕ್ಕೆ ಬಲಿಯಾದವರ ಹಾಗೂ ಕ್ಷಣಿಕ ಆಮಿಷಕ್ಕೆ ಒಳಗಾದವರ ನೈಜ ಉದಾಹರಣೆಗಳನ್ನು ನೀಡಿ ಯುವಕರಿಗೆ ಎಚ್ಚರಿಕೆಯ ಪಾಠ ಹೇಳುವುದು ರೀನಾ ಸುವರ್ಣ ಅವರ ಶೈಲಿಯಾಗಿದೆ. ಅಪರಾಧ ನಡೆದ ಮೇಲೆ ಶಿಕ್ಷಿಸುವುದಕ್ಕಿಂತ, ಯುವಜನರು ತಪ್ಪು ಹಾದಿ ಹಿಡಿಯದಂತೆ ತಡೆಯುವುದೇ ನಿಜವಾದ ಸಾಮಾಜಿಕ ಸೇವೆ ಎಂದು ನಂಬಿರುವ ಇವರ ಉಪನ್ಯಾಸಗಳಿಗೆ ಯುವಸಮುದಾಯದಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇವರ ಈ ಸಮಾಜಮುಖಿ ಚಿಂತನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೃಹತ್ ಕಾರ್ಯಾಚರಣೆಗಳ ಯಶಸ್ವಿ ನೇತೃತ್ವ
ರೀನಾ ಸುವರ್ಣ ಅವರ ತನಿಖಾ ದಕ್ಷತೆ ಹಾಗೂ ಕಾರ್ಯಾಚರಣೆಯ ವೈಖರಿ ಹಲವು ಪ್ರಮುಖ ಪ್ರಕರಣಗಳಲ್ಲಿ ಸಾಬೀತಾಗಿದೆ. 2026ರಲ್ಲಿ ವೈಟ್‌ಫೀಲ್ಡ್, ಕಾಡುಗೋಡಿ ಹಾಗೂ ಮಹದೇವಪುರ ಉಪವಿಭಾಗಗಳಲ್ಲಿ ಅಕ್ರಮ ವಲಸಿಗರ ಪತ್ತೆಗೆ ನಡೆದ ‘ಆಪರೇಷನ್ ಮುಕ್ತ’ ಕಾರ್ಯಾಚರಣೆಯ ನೇತೃತ್ವವನ್ನು ಇವರೇ ವಹಿಸಿದ್ದರು. ಇದರೊಂದಿಗೆ ಅವಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ₹81 ಲಕ್ಷ ಮೌಲ್ಯದ ಆಭರಣ ಕಳವು, ಮದುವೆ ಮಂಟಪಗಳನ್ನು ಗುರಿಯಾಗಿಸಿಕೊಂಡು ನಡೆದಿದ್ದ ₹47.60 ಲಕ್ಷ ಮೌಲ್ಯದ ಕಳ್ಳತನ ಹಾಗೂ ಮಹದೇವಪುರದಲ್ಲಿ 20 ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳನ್ನು ಇವರ ತಂಡ ಯಶಸ್ವಿಯಾಗಿ ಭೇದಿಸಿದೆ. ಅಲ್ಲದೆ, ವಿವಿಧ ಠಾಣಾ ವ್ಯಾಪ್ತಿಯಿಂದ ಕಳವಾಗಿದ್ದ ₹2.70 ಕೋಟಿ ಮೌಲ್ಯದ 1,119 ಮೊಬೈಲ್ ಫೋನ್‌ಗಳನ್ನು ಮರುಸ್ವಾಧೀನಪಡಿಸಿಕೊಳ್ಳುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
ರೌಡಿಗಳಿಂದ ಡ್ರಗ್ಸ್ ಜಾಲ ಹಾಗೂ ಪ್ರಮುಖ ತನಿಖೆಗಳು
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 2026ರ ಜುಲೈನಲ್ಲಿ ವೈಟ್‌ಫೀಲ್ಡ್ ವ್ಯಾಪ್ತಿಯ 80ಕ್ಕೂ ಹೆಚ್ಚು ರೌಡಿಗಳು, 25 ಎಂಒಬಿ ಆರೋಪಿಗಳು ಹಾಗೂ 29 'ಟ್ರಬಲ್ ಮಾಂಗರ್ಸ್' ಮನೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಲಾಗಿತ್ತು. ಡ್ರಗ್ಸ್ ವಿರುದ್ಧ ಸಮರ ಸಾರಿದ್ದ ಇವರ ತಂಡ 2023ರಲ್ಲಿ ₹12 ಕೋಟಿ ಮೌಲ್ಯದ 1,500 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡು ಪೊಲೀಸ್ ಆಯುಕ್ತರಿಂದ ಶಹಬ್ಬಾಸ್‌ಗಿರಿ ಪಡೆದಿತ್ತು. ಪ್ರಮುಖವಾಗಿ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಹಾಗೂ ಪಿಎಫ್‌ಐ ಕಾರ್ಯಕರ್ತರ ಬಂಧನಕ್ಕೆ ಸಂಬಂಧಿಸಿದಂತೆ ಎನ್‌ಐಎ ಜತೆಗೂಡಿ ಸಿಸಿಬಿ ಎಸಿಪಿಯಾಗಿ ಯಶಸ್ವಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. 2023ರ ಚೈತ್ರಾ ಕುಂದಾಪುರ ಪ್ರಕರಣದ ತನಿಖೆಯಲ್ಲಿ ಉಡುಪಿಯಲ್ಲಿ ಶೋಧ ನಡೆಸಿ ಕೋಟ್ಯಂತರ ಮೌಲ್ಯದ ಆಸ್ತಿ ದಾಖಲೆ, ಚಿನ್ನಾಭರಣ ಹಾಗೂ ನಗದನ್ನು ಜಪ್ತಿ ಮಾಡಿದ್ದರು.
ಕೊರೊನಾ ವೇಳೆ 19 ರೋಗಿಗಳ ಪ್ರಾಣ ಉಳಿಸಿದ್ದ ನಾರಿ
2021ರ ಮೇ 12ರ ಕೊರೊನಾ ಮಹಾಮಾರಿ ಸಮಯದಲ್ಲಿ, ಬೆಂಗಳೂರಿನ ಶ್ರೇಯಸ್ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಆಕ್ಸಿಜನ್ ಸಿಲಿಂಡರ್ ಸೋರಿಕೆಯಾಗಿ 19 ರೋಗಿಗಳ ಜೀವ ಅಪಾಯದಲ್ಲಿದ್ದಾಗ, ತಮ್ಮ ವ್ಯಾಪ್ತಿಗೆ ಬರದಿದ್ದರೂ ತಕ್ಷಣ ಸ್ಥಳಕ್ಕೆ ಧಾವಿಸಿ ತುರ್ತು ಆಮ್ಲಜನಕ ವ್ಯವಸ್ಥೆ ಮಾಡುವ ಮೂಲಕ ರೋಗಿಗಳ ಪ್ರಾಣ ಉಳಿಸಿದ್ದರು. ಲಾಕ್‌ಡೌನ್ ಸಮಯದಲ್ಲಿ ಅಸಹಾಯಕರಿಗೆ ಆಹಾರ ಧಾನ್ಯ ವಿತರಣೆ ಹಾಗೂ ನಕಲಿ ರೆಮ್‌ಡಿಸಿವಿರ್ ಜಾಲದ ಭೇದನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅಪರಾಧಿಗಳನ್ನು ಹೆಡೆಮುರಿ ಕಟ್ಟುವುದು ಮಾತ್ರವಲ್ಲದೆ, ತಪ್ಪು ದಾರಿಯಲ್ಲಿರುವವರನ್ನು ಸರಿದಾರಿಗೆ ತರುವ ರೀನಾ ಸುವರ್ಣ ಅವರ ಅತ್ಯುತ್ತಮ ಸೇವೆಗೆ ರಾಜ್ಯ ಸರ್ಕಾರದ 'ಮುಖ್ಯಮಂತ್ರಿಗಳ ಪದಕ' ಗೌರವವೂ ಲಭಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...