ಮಂಡ್ಯ : ಮದ್ದೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಭವನಕ್ಕೆ ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ತನು, ಮನ, ಧನ ನೆರವು ನೀಡಬೇಕೆಂದು ಶಾಸಕ ಕೆ.ಎಂ.ಉದಯ್ ಕರೆ ನೀಡಿದರು.
ನಗರದ ಪ್ರವಾಸಿ ಮಂದಿರದ ಬಳಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಭವನಕ್ಕೆ ಜಿಲ್ಲಾ ಕಾರ್ಯದರ್ಶಿ ಆದೇಶ್ ವಿ.ಗೊರಕಯ್ಯ 50 ಸಾವಿರ ರೂ ದೇಣಿಗೆಯನ್ನು ಶಾಸಕ ಕೆ.ಎಂ.ಉದಯ್ ಅವರಿಗೆ ಹಸ್ತಾಂತರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಹಲವಾರು ವರ್ಷಗಳಿಂದ ಕಾಂಗ್ರೆಸ್ ಕಛೇರಿಗೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿತ್ತು. ಕಳೆದ ವರ್ಷ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಾದ್ಯಂತ 100 ಕಾಂಗ್ರೆಸ್ ಭವನಗಳನ್ನು ನಿರ್ಮಾಣ ಮಾಡಬೇಕೆಂದು
ಕರೆ ನೀಡಿದ್ದಾರೆ.
ಹೀಗಾಗಿ, ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಪ್ರವಾಸಿ ಮಂದಿರದ ಬಳಿಯ ನನ್ನ ಸ್ವಂತ ನಿವೇಶನವನ್ನು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನೋಂದಣಿ ಮಾಡಿಸಿದ್ದು, ಮಾಜಿ ಸಂಸದರಾದ ಡಿ.ಕೆ.ಸುರೇಶ್ ಅವರು ಕೂಡ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಕಾಮಗಾರಿಯೂ ಸಹ ಭರದಿಂದ ಸಾಗುತ್ತಿದ್ದು, ಒಂದು ವರ್ಷದೊಳಗೆ ಪೂರ್ಣಗೊಂಡು ಆ ಕಛೇರಿಯಿಂದಲೇ ಪಕ್ಷದ ಎಲ್ಲಾ ಸಭೆ, ಸಮಾರಂಭ ಹಾಗೂ ಮುಂದಿನ ಚುನಾವಣಾ ಪ್ರಕ್ರಿಯೆಗಳು ನಡೆಯಲಿವೆ ಎಂದರು.
ನಿಮ್ಮೆಲ್ಲರ ಸಹಕಾರದಿಂದ ಭವ್ಯವಾದ ಕಾಂಗ್ರೆಸ್ ಭವನ ನಿರ್ಮಾಣ ಮಾಡುತ್ತಿದ್ದೇವೆ. ರಾಜಕಾರಣದಲ್ಲಿ ಯಾರೂ ಶಾಶ್ವತ ಅಲ್ಲ. ಕಾಲ ಚಕ್ರ ತಿರುಗಿದಂತೆ ನಡೆಯುತ್ತಿರುತ್ತದೆ. ನಮ್ಮ ಗುರುತುಗಳನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕು. ಈ ನಿಟ್ಟಿನಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ವಂತಿಕೆ ನೀಡಬೇಕು. ಇಲ್ಲಿ ನಿರ್ಮಾಣವಾಗುವ ಭವನ ಕೇವಲ ಕಾಂಗ್ರೆಸ್ ಭವನ ಅಲ್ಲ. ಕಾರ್ಯಕರ್ತರಿಗೆ ಪ್ರಜಾಪ್ರಭುತ್ವವನ್ನು ಉಳಿಸುವ ಸೌಧವಾಗಲಿದ್ದು, ಆದೇಶ್ ವಿ.ಗೊರಕಯ್ಯ ಅವರು 50 ಸಾವಿರ ರೂ.ದೇಣಿಗೆ ನೀಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದೇ ರೀತಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಶಕ್ತಿಯನುಸಾರ ದೇಣಿಗೆ ನೀಡಬೇಕೆಂದರು.
ಜಿಲ್ಲಾ ಕಾರ್ಯದರ್ಶಿ ಆದೇಶ್ ಮಾತನಾಡಿ, ಕಾಂಗ್ರೆಸ್ ಭವನ ನಿರ್ಮಾಣದಿಂದ ಪಕ್ಷದ ಸಂಘಟನೆಗೆ ಉಪಕಾರಿಯಾಗಲಿದ್ದು, ಕಾರ್ಯಕರ್ತರಿಗೂ ಅನುಕೂಲವಾಗಲಿದೆ. ಹೀಗಾಗಿ, ರಾಜ್ಯಾದ್ಯಂತ ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕರೆ ನೀಡಿದ್ದಾರೆ. ಈಗಾಗಲೇ ನಗರದಲ್ಲಿ ಕಾಂಗ್ರೆಸ್ ಭವನಕ್ಕೆ ಶಾಸಕರಾದ ಉದಯ್ ಅವರು ತಮ್ಮ ಸ್ವಂತ ನಿವೇಶನವನ್ನು ನೀಡಿದ್ದಾರೆ. ಮಾಜಿ ಸಂಸದರಾದ ಡಿ.ಕೆ.ಸುರೇಶ್ ಅವರು ಚಾಲನೆ ಕೂಡ ನೀಡಿದ್ದು, ಕಾಮಗಾರಿಯೂ ಸಹ ಭರದಿಂದ ಸಾಗುತ್ತಿದೆ. ಹೀಗಾಗಿ ಕಟ್ಟಡವು ಆದಷ್ಟು ಬೇಗ ನಿರ್ಮಾಣವಾಗಲಿ ಎಂಬ ಉದ್ದೇಶದಿಂದ ವೈಯಕ್ತಿಕವಾಗಿ ಶಾಸಕರಿಗೆ 50 ಸಾವಿರ ರೂ.ದೇಣಿಗೆ ನೀಡಲಾಗುತ್ತಿದೆ ಎಂದರು.
ಇದೇ ವೇಳೆ ಜಿಲ್ಲಾ ಉಪಾಧ್ಯಕ್ಷ ಎಂ.ಹೊಂಬಯ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಜು, ಅರಳಾಪುರ ಕುಮಾರ್, ಮಹಾಲಿಂಗಯ್ಯ ಮತ್ತಿತರರು ಇದ್ದರು.