ವಾಷಿಂಗ್ಟನ್: ಆಕಾಶದಲ್ಲೇ ಎದುರಾದ ಭೀಕರ ಅಪಾಯದ ಸಂದರ್ಭದಲ್ಲಿ ಅಸಾಧಾರಣ ಧೈರ್ಯ ಪ್ರದರ್ಶಿಸಿ ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸಕ್ಕೆ ಅಮೆರಿಕದ ಸಂಸತ್ ನಲ್ಲಿ ವಿಶೇಷ ಗೌರವ ವ್ಯಕ್ತವಾಗಿದೆ. ಫ್ಲೈದುಬೈ ವಿಮಾನದಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಮಚ್ಚಾರ್ ಅವರು ತೋರಿದ ಧೈರ್ಯವನ್ನು ಶ್ಲಾಘಿಸಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ನಿರ್ಣಯ ಮಂಡಿಸಲಾಗಿದೆ.
ಸೆಪ್ಟೆಂಬರ್ 30ರಂದು ಫ್ಲೈದುಬೈ FZ1073 ವಿಮಾನ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಸ್ರೇಲ್‌ನ ಟೆಲ್ ಅವೀವ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದತ್ತ ಪ್ರಯಾಣಿಸುತ್ತಿತ್ತು. ವಿಮಾನದಲ್ಲಿ ಸುಮಾರು 174 ಮಂದಿ ಇದ್ದರು. ಅವರಲ್ಲಿ 27 ಮಕ್ಕಳು ಹಾಗೂ ನಾಲ್ವರು ಅಮೆರಿಕದ ನಾಗರಿಕರೂ ಇದ್ದರು ಎಂದು ಅಮೆರಿಕದ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಕಾಕ್ ಪಿಟ್ ನಲ್ಲೇ ದಾಳಿ
ವಿಮಾನ ಹಾರಾಟದಲ್ಲಿದ್ದ ವೇಳೆ ಸಹ-ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಕಾಕ್ ಪಿಟ್ ನಲ್ಲೇ ದಾಳಿ ನಡೆಸಿ, ವಿಮಾನದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆಯಲು ಪ್ರಯತ್ನಿಸಿದ್ದಾನೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ದಾಳಿಯ ಸಂದರ್ಭದಲ್ಲಿ ವಿಮಾನವು ಅತ್ಯಂತ ವೇಗವಾಗಿ ಎತ್ತರ ಕಳೆದುಕೊಂಡಿದ್ದು, 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ 14,000 ಅಡಿಗೂ ಹೆಚ್ಚು ಎತ್ತರ ಕುಸಿದಿತ್ತು.
ಗಂಭೀರವಾಗಿ ಗಾಯಗೊಂಡಿದ್ದರೂ ಸ್ಮಿತ್ ಮಚ್ಚಾರ್ ಧೃತಿಗೆಡಲಿಲ್ಲ. ತಮ್ಮ ಮೇಲಿನ ದಾಳಿಯನ್ನು ಎದುರಿಸುತ್ತಲೇ ಕಾಕ್ ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ವಿಮಾನದಲ್ಲಿದ್ದ ಕರ್ತವ್ಯದಲ್ಲಿರದ ಇತರ ಪೈಲಟ್‌ಗಳು ಕಾಕ್‌ಪಿಟ್‌ಗೆ ಪ್ರವೇಶಿಸಲು ಸಾಧ್ಯವಾಯಿತು. ನಂತರ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ ದಾಳಿ ನಡೆಸಿದ ವ್ಯಕ್ತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.
ತಬೂಕ್ ನಲ್ಲಿ ಸುರಕ್ಷಿತ ಲ್ಯಾಂಡಿಂಗ್
ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಅಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದು, ಸ್ಮಿತ್ ಮಚ್ಚಾರ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಬಳಿಕ ಅವರು ಯುಎಇಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯ ಕುರಿತು ಯುಎಇ ಅಟಾರ್ನಿ ಜನರಲ್ ಅಕ್ಟೋಬರ್ 3ರಂದು ನಡೆಸಿದ ತನಿಖೆಯಲ್ಲಿ ಸಹ-ಪೈಲಟ್ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸಿದ್ದಾನೆ ಎಂದು ಪ್ರಕಟಿಸಿದ್ದರು. ಘಟನೆಯ ಹಿಂದಿನ ಉದ್ದೇಶ, ಹಿನ್ನೆಲೆ ಹಾಗೂ ಇತರ ಸಾಧ್ಯ ಸಂಪರ್ಕಗಳ ಕುರಿತು ತನಿಖೆ ಮುಂದುವರಿದಿದೆ.
ಅಮೆರಿಕ ಸಂಸತ್ ನಿರ್ಣಯದಲ್ಲಿ ಏನಿದೆ?
ನ್ಯೂಜೆರ್ಸಿಯ ಡೆಮಾಕ್ರಟಿಕ್ ಸಂಸದ ಜೋಶ್ ಗಾಟ್‌ಹೈಮರ್ ಅವರು ಅಕ್ಟೋಬರ್ 5ರಂದು H.Res.1612 ನಿರ್ಣಯವನ್ನು ಮಂಡಿಸಿದ್ದು, ರಿಪಬ್ಲಿಕನ್ ಸಂಸದರಾದ ಮೈಕೆಲ್ ಮೆಕಾಲ್ ಮತ್ತು ಡಾನ್ ಬೇಕನ್ ಸಹ-ಪ್ರಾಯೋಜಕರಾಗಿದ್ದಾರೆ. ನಿರ್ಣಯವನ್ನು ಹೌಸ್ ವಿದೇಶಾಂಗ ವ್ಯವಹಾರಗಳ ಸಮಿತಿಗೆ ಕಳುಹಿಸಲಾಗಿದೆ.
ನಿರ್ಣಯದಲ್ಲಿ ಸ್ಮಿತ್ ಮಚ್ಚಾರ್ ಅವರ “ಅಸಾಧಾರಣ ಧೈರ್ಯ”ವನ್ನು ಶ್ಲಾಘಿಸಲಾಗಿದೆ. ಅಲ್ಲದೆ ಕಾಕ್ ಪಿಟ್ ಗೆ ಪ್ರವೇಶಿಸಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ನೆರವಾದ ಇತರ ಪೈಲಟ್ ಗಳು, ಕ್ಯಾಬಿನ್ ಸಿಬ್ಬಂದಿ ಮತ್ತು ಪ್ರಯಾಣಿಕರ ಸಾಹಸವನ್ನೂ ಪ್ರಶಂಸಿಸಲಾಗಿದೆ.
ಅಮೆರಿಕ ಸಂಸತ್ ನಿರ್ಣಯವು ಘಟನೆಯನ್ನು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನದ ಸುರಕ್ಷತೆಯ ಮೇಲಿನ ಭಯೋತ್ಪಾದಕ ದಾಳಿ ಎಂದು ಖಂಡಿಸುವುದರ ಜೊತೆಗೆ, ಸೌದಿ ಅರೇಬಿಯಾ ಮತ್ತು ಯುಎಇ ಸರ್ಕಾರಗಳು ಸಂಪೂರ್ಣ ಹಾಗೂ ತ್ವರಿತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ. ಅಮೆರಿಕ ಮತ್ತು ಇಸ್ರೇಲ್‌ಗೆ ತನಿಖೆಯ ಮಾಹಿತಿಯನ್ನು ನೀಡುವಂತೆಯೂ ನಿರ್ಣಯದಲ್ಲಿ ಹೇಳಲಾಗಿದೆ.
ಮೋದಿ, ನೆತನ್ಯಾಹು ಮೆಚ್ಚುಗೆ
ಸ್ಮಿತ್ ಮಚ್ಚಾರ್ ಅವರ ಧೈರ್ಯಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಿಂದಲೇ ಇಬ್ಬರು ನಾಯಕರೊಂದಿಗೆ ಸ್ಮಿತ್ ಮಚ್ಚಾರ್ ಮಾತನಾಡಿದ್ದು, ತಮ್ಮ ಜೀವದ ಜೊತೆಗೆ ವಿಮಾನದಲ್ಲಿದ್ದ ಪ್ರಯಾಣಿಕರ ಜೀವ ರಕ್ಷಿಸುವುದೇ ತಮ್ಮ ಮುಖ್ಯ ಉದ್ದೇಶವಾಗಿತ್ತು ಎಂದು ವಿವರಿಸಿದ್ದಾರೆ.
ಈ ಘಟನೆ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ತೀವ್ರ ಅಪಾಯದ ಸಂದರ್ಭದಲ್ಲೂ ಕರ್ತವ್ಯಪ್ರಜ್ಞೆ, ತರಬೇತಿ ಮತ್ತು ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರ ಸಾಹಸಕ್ಕೆ ಮತ್ತೊಂದು ಮಹತ್ವದ ಗೌರವ ದೊರೆತಂತಾಗಿದೆ. ವಿಮಾನದಲ್ಲಿದ್ದ ಇತರ ಪೈಲಟ್‌ಗಳು, ಸಿಬ್ಬಂದಿ ಹಾಗೂ ಪ್ರಯಾಣಿಕರ ಸಹಕಾರವೂ ದುರಂತ ತಪ್ಪಿಸುವಲ್ಲಿ ನಿರ್ಣಾಯಕವಾಗಿತ್ತು.