ಬೆಂಗಳೂರು: ಮತದಾರರ ಹಕ್ಕುಗಳ ರಕ್ಷಣೆಗಾಗಿ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಲು ಯತ್ನಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಂಧನ ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿ ದಹಿಸಿ, ಪಂಜಿನ ಮೆರವಣಿಗೆ ನಡೆಸಲಾಯಿತು. ಈ ವೇಳೆ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಲಾಯಿತು.
ಬುಧವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಯುವಕರು, ವಿದ್ಯಾರ್ಥಿಗಳು
ರಾಹುಲ್ ಗಾಂಧಿಯವರ ಮುಖವಾಡ ಧರಿಸಿ, ನಾನು ರಾಹುಲ್ ಗಾಂಧಿ ಎಂಬ ನಾಮಫಲಕವನ್ನು ಕುತ್ತಿಗೆಗೆ ನೇತು ಹಾಕಿಕೊಂಡು, ಪಂಜನ್ನು ಹಿಡಿದು ಘೋಷಣೆಗಳನ್ನು ಕೂಗುತ್ತ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ನೂರಾರು ಪ್ರತಿಭಟನಾಕಾರರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಮಾತನಾಡಿ, “ದೇಶದ ಸ್ವಾತಂತ್ರ್ಯ, ಸಾರ್ವಭೌಮತ್ವಕ್ಕಾಗಿ ಜೈಲಿಗೆ ಹೋದ ಇತಿಹಾಸ ಕಾಂಗ್ರೆಸ್ ಪಕ್ಷದ್ದು, ಬಂಧನಕ್ಕೆ ಹೆದರುವ ಜಾಯಮಾನ ನಮ್ಮದಲ್ಲ. ರಾಹುಲ್ ಗಾಂಧಿಯವರ ಧ್ವನಿಯನ್ನು ಬಂಧನದ ಮೂಲಕ ಅಡಗಿಸುವುದು ಅಸಾಧ್ಯ. ಚುನಾವಣಾ ಪ್ರಕ್ರಿಯೆಯಲ್ಲಿನ ಅನುಮಾನಗಳು ಮತ್ತು ಆತಂಕಗಳಿಗೆ ಪಾರದರ್ಶಕ ತನಿಖೆಯ ಮೂಲಕ ಉತ್ತರ ನೀಡಬೇಕೇ ಹೊರತು, ಪ್ರಶ್ನೆ ಕೇಳುವವರನ್ನು ಬಂಧಿಸುವ ಹೇಡಿತನದ ಕೃತ್ಯದಿಂದಲ್ಲ," ಎಂದು ಕಿಡಿಕಾರಿದರು.
"ಮತದಾನ ಕೇವಲ ಹಕ್ಕಲ್ಲ; ಅದು ಪ್ರಜಾಪ್ರಭುತ್ವದ ಅಸ್ತಿತ್ವದ ಆಧಾರ. ರಾಹುಲ್ ಗಾಂಧಿಯವರನ್ನು ಬಂಧಿಸಬಹುದು, ನನ್ನನ್ನು ಬಂಧಿಸಬಹುದು, ಇಂದು ರಾಹುಲ್ ಗಾಂಧಿಯವರನ್ನು ಪ್ರತಿನಿಧಿಸುತ್ತಿರುವ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನೂ ಬಂಧಿಸಬಹುದು. ಆದರೆ, ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ," ಎಂದ ಅವರು, "ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗಾಗಿ ಇಡೀ ದೇಶವೇ ಬೀದಿಗಿಳಿದು ಹೋರಾಟ ಮಾಡುವ ಕಾಲ ದೂರವಿಲ್ಲ. ಎಲ್ಲರನ್ನೂ ನಿಮ್ಮಿಂದ ಬಂಧಿಸಲು ಸಾಧ್ಯವೇ," ಎಂದು ಸವಾಲು ಹಾಕಿದರು.
ಈ ವೇಳೆ ಕೆಪಿವೈಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷರಾದ ಶ್ರೀಧರ್ ಜಾಧವ್, ಕಾನೂನು ಘಟಕದ ರಾಜ್ಯ ಉಪಾಧ್ಯಕ್ಷರಾದ ಸಮೃದ್ಧ್ ಹೆಗಡೆ, ಬೆಂಗಳೂರು ಕೇಂದ್ರ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ರಂಜಿತ್, ಉತ್ತರ ಜಿಲ್ಲಾಧ್ಯಕ್ಷರಾದ ರಾಹುಲ್ ಗೌಡ, ಪಶ್ಚಿಮ ಜಿಲ್ಲಾಧ್ಯಕ್ಷರಾದ ಪ್ರವೀಣ್, ಪೂರ್ವ ಜಿಲ್ಲಾಧ್ಯಕ್ಷರಾದ ರಾಮ್ ನಾಯಕ್ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.