ಮಂಡ್ಯ : ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಹಾಲಿನಪುಡಿ ಕಲಬೆರಕೆ ಹಗರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮನ್ ಮುಲ್ ಕಛೇರಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.
ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಮಾತನಾಡಿ, ಬಹುಕೋಟಿ ಹಾಲಿನ ಪುಡಿ ಕಲಬೆರಕೆ ಪ್ರಕರಣದ ಹಿಂದಿರುವ ಭ್ರಷ್ಟರನ್ನು ರಾಜ್ಯ ಸರ್ಕಾರವು ರಕ್ಷಿಸುತ್ತಿದ್ದು, ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಕಲಬೆರಕೆ ಹಾಲಿನ ಪುಡಿ ಪ್ರಕರಣದಲ್ಲಿ ಮನ್ಮುಲ್ ಮಾಜಿ ಅಧ್ಯಕ್ಷ ಶಿವಪ್ಪ ಸೇರಿದಂತೆ ಹಲವು ಅಧಿಕಾರಿಗಳು ಶಾಮೀಲಾಗಿದ್ದಾರೆ. ಅಲ್ಲದೆ ಕೇರಳದ ವ್ಯಕ್ತಿಯೊಬ್ಬರು ಭಾಗಿಯಾಗಿದ್ದು, ಈ ಪ್ರಕರಣವು ಎರಡು ರಾಜ್ಯಗಳಿಗೆ ಸಂಬಂಧ ಪಟ್ಟ ವಿಷಯವಾಗಿರುವುದರಿಂದ ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ ಅವರು, ಈ ಭ್ರಷ್ಟಾಚಾರದ ಪ್ರಕರಣವು ಜಿಲ್ಲೆಯ ರೈತರಿಗೆ ಬಗೆದಿರುವ ದ್ರೋಹವಾಗಿದೆ ಎಂದು ಗುಡುಗಿದರು.
ಮಂಡ್ಯ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಹಾಲು ಬಾಣಂತಿಯರು, ಅಂಗನವಾಡಿ, ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಗೂ ಸೈನಿಕರಿಗೆ ತಲುಪುತ್ತಿದೆ. ಇಂತಹ ಹಾಲಿನ ಪುಡಿ ಕಲಬೆರಕೆಯಾಗಿದೆ ಎಂಬ ಆರೋಪ ಕೇಳಿಬಂದಿರುವುದು ವಿಷಾದನೀಯ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ದೇಶದ ಭವಿಷ್ಯದ ಮಕ್ಕಳು ಹಾಗೂ ದೇಶದ ಯೋಧರು ಕುಡಿಯುವ ಹಾಲನ್ನೇ ಕಲಬೆರಕೆ ಮಾಡಿರುವವರಿಗೆ ಯಾವ ಶಿಕ್ಷೆ ನೀಡಿದರು ಕಡಿಮೆ ಎಂದ ಅವರು, ಮಾಧ್ಯಮದವರಿಂದ ಇಷ್ಟು ದೊಡ್ಡ ಪ್ರಕರಣ ಬಯಲಿಗೆ ಬಂದಿದೆ ಎಂದರು.
ಮಾಜಿ ಶಾಸಕ ಅಶ್ವಥ್ ನಾರಾಯಣ್ ಮಾತನಾಡಿ, ಹಲವು ವರ್ಷಗಳ ಹಿಂದೆ ಹಾಲಿಗೆ ನೀರು ಬೆರೆಸುವ ಪ್ರಕರಣ ಮನ್ ಮುಲ್ ನಲ್ಲಿ ನಡೆದಿತ್ತು. ಈಗ ಹಾಲಿನ ಪುಡಿ ಕಲಬೆರಕೆ ಪ್ರಕರಣದಿಂದ ಸಾವಿರಾರು ಕೋಟಿ ರೂ. ಲೂಟಿಯಾಗಿದೆ ಆದ್ದರಿಂದ ಪ್ರಕರಣದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆಯಲಾಗುವುದು ಹಾಗೂ ಶೀಘ್ರವಾಗಿ ಉನ್ನತ ತನಿಖೆಗೆ ಒತ್ತಾಯಿಸಲಾಗುವುದು ಎಂದರು.
ಆಹಾರ ಸಚಿವ ಯು.ಟಿ.ಖಾದರ್ ಅವರು ಮನ್ಮುಲ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿ
7 ದಿನದ ಒಳಗಾಗಿ ಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗದಿದ್ದರೆ ಮತ್ತೆ ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಕೈ ಬಿಟ್ಟರು.
ಬಳಿಕ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ನೇತೃತ್ವದಲ್ಲಿ ಮನ್ಮುಲ್ ಗೇಟ್ ಬಳಿ ಜಮಾಯಿಸಿ ನೂರಾರು ಬಿಜೆಪಿ ಕಾರ್ಯಕರ್ತರು ಗೇಟ್ ಅನ್ನು ತಳ್ಳಿ, ಇನ್ನೂ ಕೆಲವರು ಗೇಟ್ ಮೇಲೆ ಹತ್ತಿ ಒಳ ನುಗ್ಗಲು ಪ್ರಯತ್ನಿಸಿದರು ಹಾಗೂ ಹಾಲಿನ ಪುಡಿಯ ಪ್ಯಾಕೆಟ್ ಗಳಿಂದ ಹಾಲು ಪುಡಿಯನ್ನು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಹಾಗೂ ಮುಖಂಡರನ್ನು ಪೊಲೀಸರು ತಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಇದೇ ವೇಳೆ ಸಚಿವರಾದ ಎನ್.ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಹಾಗೂ ಜಿಲ್ಲೆಯ ಕಾಂಗ್ರೆಸ್ ಶಾಸಕರ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಅಶೋಕ್ ಜಯರಾಮ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹಾಗಲಹಳ್ಳಿ ರಘು, ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ, ಮುಖಂಡರಾದ ಸಿದ್ದರಾಮಯ್ಯ, ಮಹದೇವು ಸೇರಿದಂತೆ ಹಲವರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ