ಭೋಪಾಲ್: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2026ರ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಇಂದು (ಶನಿವಾರ) ಬಲಿಷ್ಠ ಚೀನಾ ತಂಡವನ್ನು ಎದುರಿಸಲಿದೆ. ಭೋಪಾಲ್‌ನ ನಾಥು ಬರ್ಖೇಡಾದಲ್ಲಿರುವ ಅಂತರರಾಷ್ಟ್ರೀಯ ಕ್ರೀಡಾ ಸಂಕೀರ್ಣದ ಹಾಕಿ ಕ್ರೀಡಾಂಗಣದಲ್ಲಿ ರಾತ್ರಿ 7 ಗಂಟೆಗೆ ಈ ಪ್ರಶಸ್ತಿ ಸುತ್ತಿನ ಕಾದಾಟ ನಡೆಯಲಿದ್ದು, ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಹೊಸ ಇತಿಹಾಸ ನಿರ್ಮಿಸಲು ಟೀಮ್ ಇಂಡಿಯಾ ಸಜ್ಜಾಗಿದೆ.
ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 6-2 ಗೋಲುಗಳ ಭರ್ಜರಿ ಜಯ ಸಾಧಿಸಿರುವ ಭಾರತೀಯ ವನಿತೆಯರು ಭಾರಿ ಆತ್ಮವಿಶ್ವಾಸದೊಂದಿಗೆ ಫೈನಲ್ ಪ್ರವೇಶಿಸಿದ್ದಾರೆ. ಮತ್ತೊಂದೆಡೆ, ಜಪಾನ್ ವಿರುದ್ಧ 1-0 ಅಂತರದ ರೋಚಕ ಗೆಲುವು ದಾಖಲಿಸಿರುವ ಚೀನಾ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.
ದಕ್ಷಿಣ ಕೊರಿಯಾ ದಾಖಲೆ ಮುರಿಯುವ ಸುವರ್ಣಾವಕಾಶ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಭಾರತ ಇದುವರೆಗೆ ಮೂರು ಬಾರಿ (2016, 2023 ಮತ್ತು 2024) ಚಾಂಪಿಯನ್ ಆಗಿ ಹೊರಹೊಮ್ಮಿದೆ. ದಕ್ಷಿಣ ಕೊರಿಯಾ ಕೂಡ ಮೂರು ಬಾರಿ ಪ್ರಶಸ್ತಿ ಗೆದ್ದಿದೆ. ಇಂದಿನ ಪಂದ್ಯದಲ್ಲಿ ಚೀನಾವನ್ನು ಮಣಿಸಿದರೆ, ನಾಲ್ಕನೇ ಬಾರಿ ಟ್ರೋಫಿ ಎತ್ತಿಹಿಡಿದ ಅತ್ಯಂತ ಯಶಸ್ವಿ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಅಲ್ಲದೆ, ಸತತ ಮೂರು ಬಾರಿ ಚಾಂಪಿಯನ್ ಆದ ಮೊದಲ ತಂಡ ಎಂಬ ದಾಖಲೆಯನ್ನೂ ಬರೆಯಲಿದೆ.
ಗೋಲುಗಳ ಸುರಿಮಳೆ ಮತ್ತು ದೀಪಿಕಾ ಅಬ್ಬರ ಪ್ರಸಕ್ತ ಟೂರ್ನಿಯಲ್ಲಿ ಅತ್ಯಂತ ಆಕ್ರಮಣಕಾರಿ ಆಟವಾಡಿರುವ ಭಾರತ ಒಟ್ಟು 29 ಗೋಲುಗಳನ್ನು ಬಾರಿಸಿ ಅಗ್ರಸ್ಥಾನದಲ್ಲಿದೆ. ಈ ಪೈಕಿ 19 ಗೋಲುಗಳು ಪೆನಾಲ್ಟಿ ಕಾರ್ನರ್ ಮೂಲಕವೇ ಬಂದಿರುವುದು ತಂಡದ ಬಲವನ್ನು ತೋರಿಸುತ್ತದೆ. 14 ಗೋಲು ಗಳಿಸಿರುವ ಚೀನಾ ಎರಡನೇ ಸ್ಥಾನದಲ್ಲಿದೆ. ವೈಯಕ್ತಿಕ ವಿಭಾಗದಲ್ಲಿ ಭಾರತದ ಫಾರ್ವರ್ಡ್ ಆಟಗಾರ್ತಿ ದೀಪಿಕಾ 10 ಗೋಲುಗಳೊಂದಿಗೆ ಟೂರ್ನಿಯ ಟಾಪ್ ಸ್ಕೋರರ್ ಆಗಿ ಮಿಂಚುತ್ತಿದ್ದಾರೆ. ಉಳಿದಂತೆ ಮುಮ್ತಾಜ್ ಖಾನ್ (4 ಗೋಲು) ಮತ್ತು ಲಾಲ್ರೆಮ್ಸಿಯಾಮಿ (3 ಗೋಲು) ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದಾರೆ.