ರಾಂಚಿ: ಭಾರತೀಯ ಕ್ರಿಕೆಟಿಗ ಇಶಾನ್ ಕಿಶನ್ ಇತ್ತೀಚೆಗೆ ಜಾರ್ಖಂಡ್‌ನ ದೇವಘರ್‌ನಲ್ಲಿರುವ ಪ್ರಸಿದ್ಧ ಬಾಬಾ ಬೈದ್ಯನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮ್ಮ ಕ್ರಿಕೆಟ್ ಭವಿಷ್ಯದ ಒಳಿತಿಗಾಗಿ ಶಿವನ ಆಶೀರ್ವಾದ ಪಡೆದ ವಿಕೆಟ್ ಕೀಪರ್-ಬ್ಯಾಟರ್, ದೇವಸ್ಥಾನದ ಆವರಣದಲ್ಲಿ ಅರ್ಚಕರು ಮತ್ತು ಭಕ್ತರಿಗೆ ಹಣ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿದ್ದ ಕಿಶನ್, ಮೊದಲು ದೇವಸ್ಥಾನದ ಹುಂಡಿಗೆ ಕಾಣಿಕೆ ಸಲ್ಲಿಸಿದರು. ಬಳಿಕ ಆವರಣದಲ್ಲಿದ್ದ ಅರ್ಚಕರಿಗೆ ಹಣ ನೀಡಲು ಆರಂಭಿಸಿದರು. ಅವರು ಹಣ ಹಂಚುವುದನ್ನು ಕಂಡು ಅಲ್ಲಿದ್ದ ಹಲವರು ಕ್ರಿಕೆಟಿಗನ ಸುತ್ತ ಜಮಾಯಿಸಿದರು. ಹಣ ಪಡೆಯಲು ಮತ್ತು ಅವರನ್ನು ಹತ್ತಿರದಿಂದ ನೋಡಲು ಜನರು ಮುಗಿಬಿದ್ದಿದ್ದರಿಂದ ದೇವಸ್ಥಾನದ ಆವರಣದಲ್ಲಿ ಕ್ಷಣಕಾಲ ನೂಕುನುಗ್ಗಲಿನ ವಾತಾವರಣ ನಿರ್ಮಾಣವಾಯಿತು.
ಕುಟುಂಬದೊಂದಿಗೆ ಬಾಬಾ ಬೈದ್ಯನಾಥನ ದರ್ಶನ 27 ವರ್ಷದ ಇಶಾನ್ ಕಿಶನ್ ಗುರುವಾರ ತಡರಾತ್ರಿ ತಮ್ಮ ಪೋಷಕರು ಮತ್ತು ಕುಟುಂಬ ಸದಸ್ಯರೊಂದಿಗೆ ದೇವಘರ್‌ಗೆ ತಲುಪಿದ್ದರು. ಬಾಬಾ ಬೈದ್ಯನಾಥ ದೇವಸ್ಥಾನದೊಂದಿಗೆ ಇಶಾನ್ ಕಿಶನ್ ಅವರಿಗೆ ಆಳವಾದ ಆಧ್ಯಾತ್ಮಿಕ ನಂಟಿದ್ದು, ಈ ಹಿಂದೆಯೂ ಹಲವು ಬಾರಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಸದ್ಯ ದೇವಸ್ಥಾನದಲ್ಲಿ ಕಿಶನ್ ಹಣ ಹಂಚುತ್ತಿರುವ ಮತ್ತು ಅವರ ಸುತ್ತ ಜನಸಾಗರ ಸೇರಿರುವ ವಿಡಿಯೋ ಆನ್‌ಲೈನ್‌ನಲ್ಲಿ ಗಮನ ಸೆಳೆದಿದ್ದು, ಅಭಿಮಾನಿಗಳು ಕ್ರಿಕೆಟಿಗನ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.