ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಪ್ರೌಢಾವಸ್ಥೆಯಲ್ಲೇ ಹಣಕಾಸು ನಿರ್ವಹಣೆ ಮತ್ತು ಬ್ಯಾಂಕಿಂಗ್ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ. ರಾಜ್ಯ ಯೋಜನಾ ನಿರ್ದೇಶನಾಲಯದ ಆದೇಶದಂತೆ, ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಹಾಗೂ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ನೆರವಿನಿಂದ ಅಭಿವೃದ್ಧಿಪಡಿಸಲಾದ ಶಾಲೆಗಳು ಸೇರಿದಂತೆ ಒಟ್ಟು 956 ಶಾಲೆಗಳಲ್ಲಿ 8 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ 'ಹಣಕಾಸು ಸಾಕ್ಷರತಾ ಶಿಕ್ಷಣ' ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರದ 2026-27ನೇ ಸಾಲಿನ ಇನ್ನೊವೇಶನ್ ಪ್ರಾಜೆಕ್ಟ್ ರೆಕರಿಂಗ್ (ಪಿಎಬಿ) ಯೋಜನೆಯಡಿ ಈ ತರಬೇತಿ ನೀಡಲಾಗುತ್ತಿದ್ದು, ಪ್ರತಿ ಶಾಲೆಗೆ 5,000 ರೂ. ನಂತೆ ಒಟ್ಟು 47.80 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ವೈಯಕ್ತಿಕ ಹಣಕಾಸು ನಿರ್ವಹಣೆ, ಬ್ಯಾಂಕಿಂಗ್ ವ್ಯವಸ್ಥೆ, ಡಿಜಿಟಲ್ ಪಾವತಿ, ಉಳಿತಾಯ, ಬಂಡವಾಳ ಹೂಡಿಕೆ, ತೆರಿಗೆ, ವಿಮೆ ಹಾಗೂ ಹಣಕಾಸು ವಂಚನೆಗಳಿಂದ ರಕ್ಷಣೆ ಪಡೆಯುವ ಕುರಿತು ಪ್ರಾಯೋಗಿಕ ಅರಿವು ಮೂಡಿಸಲಾಗುವುದು.
ಈ ಯೋಜನೆಯ ಅನುಷ್ಠಾನಕ್ಕಾಗಿ ಪ್ರತಿ ಶಾಲೆಯಲ್ಲೂ ತಿಂಗಳಿಗೆ ಕನಿಷ್ಠ ಒಂದು ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆ ನಡೆಸುವುದು ಕಡ್ಡಾಯವಾಗಿದೆ. ಬ್ಯಾಂಕ್‌ಗಳು, ಸಿಎ ಹಾಗೂ ಹಣಕಾಸು ಸಲಹೆಗಾರರ ಸಹಯೋಗದೊಂದಿಗೆ ಬಜೆಟ್ ತಯಾರಿ, ಸರಳ ಬಡ್ಡಿ ಲೆಕ್ಕಾಚಾರ, ಪೋಸ್ಟರ್ ರಚನೆ, ರಸಪ್ರಶ್ನೆ ಸ್ಪರ್ಧೆ ಹಾಗೂ ಯುಪಿಐ ಮತ್ತು ಎಟಿಎಂಗಳ ಅಣಕು ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಜತೆಗೆ, ವಿದ್ಯಾರ್ಥಿಗಳಿಗೆ ಸ್ಥಳೀಯ ಬ್ಯಾಂಕ್‌ಗಳಿಗೆ ಶೈಕ್ಷಣಿಕ ಭೇಟಿ ಹಾಗೂ ಸಾಧ್ಯವಾದಲ್ಲಿ ಬೆಂಗಳೂರು ಷೇರು ವಿನಿಮಯ ಕೇಂದ್ರಕ್ಕೆ ಭೇಟಿ ನೀಡಿ ಷೇರು ಮಾರುಕಟ್ಟೆ ವಹಿವಾಟಿನ ಪ್ರಾಯೋಗಿಕ ಮಾಹಿತಿ ಪಡೆಯಲು ಅವಕಾಶ ಕಲ್ಪಿಸುವಂತೆ ಎಲ್ಲ ಜಿಲ್ಲಾ ಉಪನಿರ್ದೇಶಕರು ಹಾಗೂ ಬಿಇಒಗಳಿಗೆ ಸೂಚಿಸಲಾಗಿದೆ.