ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ 'ಗೃಹಜ್ಯೋತಿ' ಯೋಜನೆಯಲ್ಲಿನ ಅಕ್ರಮಗಳನ್ನು ತಡೆಗಟ್ಟಿ, ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ನೈಜ ಲಾಭ ತಲುಪಿಸುವ ನಿಟ್ಟಿನಲ್ಲಿ ಕೊಪ್ಪಳ ನಗರದಾದ್ಯಂತ ಮನೆ-ಮನೆ ಭೇಟಿ ಮರುಪರಿಶೀಲನಾ ಪ್ರಕ್ರಿಯೆ ಚುರುಕುಗೊಂಡಿದೆ.
ನಗರದ ಕುವೆಂಪು ನಗರ ಸೇರಿದಂತೆ ವಿವಿಧ ವಾರ್ಡ್ಗಳಲ್ಲಿ ಪರಿಶೀಲನೆ ಕಾರ್ಯ ಸ್ವಲ್ಪ ವಿಳಂಬವಾಗುತ್ತಿರುವ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಜಿ. ಗೊಂಡಬಾಳ ಅವರು ಸ್ವತಃ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಮಂಜುನಾಥ ಅವರು, "ಕಾಂಗ್ರೆಸ್ ಸರ್ಕಾರವು ಬಡವರ ಹಾಗೂ ಸಮಾಜದ ಎಲ್ಲಾ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಪ್ರತಿವರ್ಷ ಸುಮಾರು 56,000 ಕೋಟಿ ರೂ. ಅನುದಾನವನ್ನು ಈ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟು ಜಾರಿಗೆ ತರುತ್ತಿರುವುದು ಅತ್ಯಂತ ಜನಪರ ಹಾಗೂ ಪ್ರಗತಿಪರ ಹೆಜ್ಜೆಯಾಗಿದೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಅರ್ಹರಿಗೆ ತೊಂದರೆಯಾಗಬಾರದು. ಅದಕ್ಕಾಗಿ ಜೆಸ್ಕಾಂ ಸಿಬ್ಬಂದಿ ನಡೆಸುತಿರುವ ಮರುಪರಿಶೀಲನೆಗೆ ಸಾರ್ವಜನಿಕರು ಹಾಗೂ ಫಲಾನುಭವಿಗಳು ಪೂರ್ಣ ಸಹಕಾರ ನೀಡಬೇಕು" ಎಂದು ವಿನಂತಿಸಿದರು.
ಇದೇ ವೇಳೆ, ಬಾಗಿಲು ಮುಚ್ಚಿರುವ (ಡೋರ್ ಲಾಕ್) ಮನೆಗಳ ಕುರಿತು ಗಮನ ಸೆಳೆದ ಅವರು, ಅಂತಹ ಮನೆಗಳಿಗೆ ಕಡ್ಡಾಯವಾಗಿ ನೋಟಿಸ್ ಅಂಟಿಸಬೇಕು. ಆ ನೋಟಿಸ್‌ನಲ್ಲಿ ಸಂಬಂಧಿಸಿದ ಏರಿಯಾದ ಮೀಟರ್ ರೀಡರ್ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಈ ಭೇಟಿಯ ಸಂದರ್ಭದಲ್ಲಿ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಮೊಟ್ಲಾ ನಾಯ್ಕ, ಎಇಇ ಸೈಯದ್ ಯುನೂಸ್, ಇಲಾಖೆಯ ಸಿಬ್ಬಂದಿಯಾದ ಎಸ್. ಒ. ಹನುಮಂತ ಕಟಗಿ, ಸೀನಿಯರ್ ಲೈನ್‌ಮನ್ ಹನುಮಂತ ಹಳ್ಳಿ, ಮೀಟರ್ ರೀಡರ್ ಹುಲಗೇಶ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.