ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಟಿಪ್ಪರ್ ಲಾರಿಯೊಂದರ ಬೇಜವಾಬ್ದಾರಿಗೆ ಐದು ವರ್ಷದ ಹಸುಗೂಸೊಂದು ಬಲಿಯಾಗಿರುವ ಮನಕಲಕುವ ಘಟನೆ ನಡೆದಿದೆ. ಉತ್ತರಹಳ್ಳಿಯ ಸಾವನದರ್ಬಾರ್ ಆಶ್ರಮದ ಬಳಿ ಈ ದುರಂತ ಸಂಭವಿಸಿದ್ದು, ಕಂದಮ್ಮನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಶಾಲೆಗೆ ತೆರಳುವಾಗ ಎದುರಾಯ್ತು ಕಂಟಕ
ಮೃತ ಬಾಲಕನನ್ನು ಭವೀನ್ (5) ಎಂದು ಗುರುತಿಸಲಾಗಿದೆ. ತಾಯಿ ತಮ್ಮ ಮಗನನ್ನು ದ್ವಿಚಕ್ರ ವಾಹನದಲ್ಲಿ ಶಾಲೆಗೆ ತಲುಪಿಸಲು ಕರೆದೊಯ್ಯುತ್ತಿದ್ದಾಗ, ಹಿಂಭಾಗದಿಂದ ಬಂದ ವೇಗದ ಟಿಪ್ಪರ್ ಲಾರಿ ಬೈಕ್‌ಗೆ ಸಾರಾಸಾಗಟವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಾಯಿ-ಮಗ ರಸ್ತೆಗೆ ಬಿದ್ದಿದ್ದು, ಈ ವೇಳೆ ಬಾಲಕನ ಮೇಲೆಯೇ ಲಾರಿಯ ಚಕ್ರ ಹರಿದುಹೋದ ಪರಿಣಾಮ ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿದೆ.
ತಾಯಿಗೆ ಗಂಭೀರ ಗಾಯ: ಚಾಲಕ ಪರಾರಿ
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ತಾಯಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದುರಂತ ಸಂಭವಿಸುತ್ತಿದ್ದಂತೆ ಚಾಲಕ ಟಿಪ್ಪರ್ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಕಾಲ್ಕಿತ್ತಿದ್ದಾನೆ. ಈ ಸಂಬಂಧ ಉತ್ತರಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.