ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪವಿತ್ರಾ ಗೌಡಗೆ ನ್ಯಾಯಾಲಯದಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮ್ಮ ಬ್ಯಾರಕ್ ಬದಲಾಯಿಸುವಂತೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಅನುಮೋದಿಸಿದೆ.
ಶೌಚಾಲಯ ಸಮಸ್ಯೆ ಹಾಗೂ ಅಲರ್ಜಿಯ ದೂರು
ಪ್ರಸ್ತುತ ತಾವು ಇರುವ ಬ್ಯಾರಕ್‌ನಲ್ಲಿ ಸುಮಾರು 20 ರಿಂದ 30 ಮಂದಿ ವಿಚಾರಣಾಧೀನ ಕೈದಿಗಳಿದ್ದು, ಬಳಕೆಗಾಗಿ ಕೇವಲ ಎರಡು ಶೌಚಾಲಯಗಳಿವೆ. ಅವುಗಳಲ್ಲಿಯೂ ಒಂದು ಸಂಪೂರ್ಣ ಹಾಳಾಗಿದೆ. ಈ ಕಾರಣದಿಂದ ತಮಗೆ ಚರ್ಮದ ಅಲರ್ಜಿ ಮತ್ತು ಸೋಂಕು ಎದುರಾಗಿದ್ದು, ಆರೋಗ್ಯ ಹದಗೆಡುತ್ತಿದೆ ಎಂದು ಪವಿತ್ರಾ ಗೌಡ ಕೋರ್ಟ್‌ಗೆ ತಿಳಿಸಿದ್ದರು. ಈ ಮನವಿಯನ್ನು ಪರಿಶೀಲಿಸಿದ ನ್ಯಾಯಪೀಠವು ಆರೋಪಿಯ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡುವಂತೆ ಆದೇಶಿಸಿದೆ.
ಜೈಲು ಮ್ಯಾನ್ಯುಯಲ್ ಪ್ರಕಾರವೇ ಕ್ರಮಕ್ಕೆ ಸೂಚನೆ
ಅರ್ಜಿಯನ್ನು ಮಾನ್ಯ ಮಾಡಿರುವ 59ನೇ ಸಿಸಿಹೆಚ್ ನ್ಯಾಯಾಲಯವು ಜೈಲಿನ ನಿಯಮಾವಳಿಗಳು ಅಂದರೆ ಜೈಲು ಮ್ಯಾನ್ಯುಯಲ್ ಅನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಸೂಕ್ತ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಕಾರಾಗೃಹದ ಅಧಿಕಾರಿಗಳಿಗೆ ಸ್ಪಷ್ಟ ಷರತ್ತುಬದ್ಧ ನಿರ್ದೇಶನ ನೀಡಿದೆ.