ಮಂಗಳೂರು: ಉದ್ಯಮಿಯೊಬ್ಬರನ್ನು ಯುವ ಕಾಂಗ್ರೆಸ್ ಮುಖಂಡನೊಬ್ಬ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಬ್ಲ್ಯಾಕ್ ಮೇಲ್ ಮಾಡಿ ಬರೋಬ್ಬರಿ 2 ಕೋಟಿ 77 ಲಕ್ಷ ರೂಪಾಯಿ ಹಣ ದೋಚಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಹಾಗೂ ಜಿತೇಶ್ ಎಂಬುವವರು ಉದ್ಯಮಿಗೆ ಹನಿಟ್ರ್ಯಾಪ್ ಮಾಡಿ, ಅಶ್ಲೀಲ ಫೋಟೋ, ವಿಡಿಯೋ ಇಟ್ಟುಕೊಂಡು ಪತ್ನಿಗೆ ತೋರಿಸುವುದಾಗಿ ಹೇಳಿ ಮೊದಲು 35 ಲಕ್ಷ ಹಣ ಪಡೆದಿದ್ದಾರೆ. ಬಳಿಕ ಹಂತ ಹಂತವಾಗಿ ಬ್ಲ್ಯಾಕ್ ಮೇಲ್ ಮುಂದುವರೆಸಿದ ಖದೀಮರು ಬರೋಬ್ಬರಿ 2 ಕೋಟಿ 77 ಲಕ್ಷ ಹಣ ಪೀಕಿದ್ದಾರೆ. ಮರ್ಯಾದೆಗೆ ಅಂಜಿ ಉದ್ಯಮಿ ಹಣ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ನಿಝಾಮ್ ಹಾಗೂ ಜಿತೇಶ್ ಇಬ್ಬರೂ ಸ್ನೇಹಿತರು. ಜಿತೇಶ್ ಮೂಲಕವೇ ಉದ್ಯಮಿಯನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಾನೆ. ವಿಡಿಯೋ, ಫೋಟೋ ಇಟ್ಟುಕೊಂಡು ಎರಡು ವರ್ಷಗಳ ಕಾಲ ನಿರಂತರ ಬ್ಲ್ಯಾಕ್ ಮೇಲ್ ಮಾಡಿ 2 ಕೋಟಿ 22 ಹಣ ವಸೂಲಿ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ನಿಝಾಮ್ ವಿವಿಐಪಿಗಳ ಜೊತೆ, ದೊಡ್ಡ ದೊಡ್ಡ ರಾಜಕಾರಣಿಗಳು, ಉದ್ಯಮಿಗಳ ಜೊತೆ ಹಾಗೂ ತಮಿಳುನಾಡು ನೂತನ ಸಿಎಂ ವಿಜಯ್ ಜೊತೆಗೆ ತಾನಿರುವಂತೆ ಸೃಷ್ಟಿಸಿರುವ ಎಐ ಫೋಟೋಗಳನ್ನು ಬಳಸಿ ಬ್ಲ್ಯಾಕ್ ಮೇಲ್ ಮಾಡಿ ಧಮ್ಕಿ ಹಾಕುತ್ತಿದ್ದ. ಎರಡು ಕೋಟಿಗೂ ಅಧಿಕ ಹಣ ವಸೂಲಿ ಮಾಡಿದರೂ ಆರೋಪಿಗಳ ಹಣದಾಹ ಕಡಿಮೆಯಾಗಿಲ್ಲ. ಮತ್ತೆ ಬ್ಲ್ಯಾಕ್ ಮೇಲ್ ಮುಂದುವರೆದಾಗ ಉದ್ಯಮಿ ಮಂಗಳೂರಿನ ಊರ್ವ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದ ಪೊಲೀಸರು ಕಾಂಗ್ರೆಸ್ ಮುಖಂಡ ನಝಾಮ್ ಹಾಗೂ ಜಿತೇಶ್ ನನ್ನು ಬಂಧಿಸಿದ್ದಾರೆ.