ಬೆಂಗಳೂರು: ಯುಪಿಎಸ್‌ಸಿ ಪರೀಕ್ಷೆಯೊಂದಿಗೆ ದಿನಾಂಕ ಘರ್ಷಣೆಯಾದ ಹಿನ್ನೆಲೆಯಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಿಜಿಸಿಇಟಿ ಎಂಬಿಎ ಮತ್ತು ಎಂಸಿಎ ಪ್ರವೇಶ ಪರೀಕ್ಷೆಗಳನ್ನು ಮುಂದೂಡಿದೆ. ಈ ಮೊದಲು ಮೇ 24 ರಂದು ನಿಗದಿಯಾಗಿದ್ದ ಈ ಪರೀಕ್ಷೆಗಳು ಈಗ ಜೂನ್ 14 ರಂದು ಜರುಗಲಿವೆ. ಆದರೆ ಎಂ.ಟೆಕ್ ಅಭ್ಯರ್ಥಿಗಳ ಪರೀಕ್ಷೆಯು ಈ ಮೊದಲಿನ ವೇಳಾಪಟ್ಟಿಯಂತೆ ಮೇ 23 ರಂದೇ ನಡೆಯಲಿದ್ದು, ಪರೀಕ್ಷಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ಹೌದು. ಇದೇ ತಿಂಗಳ 24ರಂದು (ಮೇ 24, 2026) ನಡೆಯಬೇಕಿದ್ದ ಎಂಬಿಎ ಮತ್ತು ಎಂಸಿಎ ಕೋರ್ಸ್‌ಗಳ ಪಿಜಿಸಿಇಟಿ (PGCET) ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮುಂದೂಡಿದೆ. ಯುಪಿಎಸ್‌ಸಿ (UPSC) ಪೂರ್ವಭಾವಿ ಪರೀಕ್ಷೆಯೂ ಅದೇ ದಿನ ನಡೆಯುತ್ತಿರುವುದರಿಂದ, ಎರಡೂ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೆಇಎ ಈ ನಿರ್ಧಾರ ಕೈಗೊಂಡಿದೆ.
ಹೊಸ ದಿನಾಂಕ: ಮೇ 24ರ ಬದಲಿಗೆ ಎಂಬಿಎ ಮತ್ತು ಎಂಸಿಎ ಪರೀಕ್ಷೆಗಳು ಈಗ ಜೂನ್14, 2026 ರಂದು (ಭಾನುವಾರ) ನಡೆಯಲಿವೆ. ಎಂ.ಇ ಮತ್ತು ಎಂ.ಟೆಕ್ (M.E/M.Tech) ಕೋರ್ಸ್‌ಗಳ ಪರೀಕ್ಷಾ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಇವು ನಿಗದಿಯಂತೆ ಮೇ23 ರಂದೇ ನಡೆಯಲಿವೆ. ಮೇ 24 ರಂದು ಯುಪಿಎಸ್‌ಸಿ ಸಿವಿಲ್ ಸರ್ವಿಸಸ್ ಪೂರ್ವಭಾವಿ ಪರೀಕ್ಷೆ ಇರುವುದರಿಂದ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಮುಂದೂಡುವಂತೆ ಕೆಇಎಗೆ ಮನವಿ ಮಾಡಿದ್ದರು.