ಕೊಪ್ಪಳ: ಜಿಲ್ಲೆಯ ಹೊಸಪೇಟೆ ರಸ್ತೆಯಲ್ಲಿರುವ ಎಸ್‌ಬಿಐ ಎಟಿಎಂ ಕೇಂದ್ರದಲ್ಲಿ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ಎಟಿಎಂ ಯಂತ್ರವನ್ನು ಒಡೆದು ಹಣ ದೋಚಲು ಖದೀಮರು ಗ್ಯಾಸ್ ಕಟರ್ ಬಳಸಿ ಕಾರ್ಯಾಚರಣೆ ನಡೆಸಿದ್ದಾರೆ.
ಎಟಿಎಂ ಯಂತ್ರವನ್ನು ಕತ್ತರಿಸುವ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪುವ ಭೀತಿಯಿಂದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಿಣಾಮ ದರೋಡೆ ಯತ್ನ ವಿಫಲಗೊಂಡಿದೆ.
ಈ ಸಂಪೂರ್ಣ ಘಟನೆ ಎಟಿಎಂ ಕೇಂದ್ರದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಟಿಎಂಗೆ ಉಂಟಾದ ಹಾನಿಯ ಪ್ರಮಾಣ ಹಾಗೂ ದರೋಡೆ ಯತ್ನದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.ಸ್ಥಳೀಯರಲ್ಲಿ ಆತಂಕ ಮೂಡಿಸಿರುವ ಈ ಘಟನೆ ಕುರಿತು ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.