ಬೆಂಗಳೂರು: ಬೆಂಗಳೂರಿನ ಕೃಷಿ ಮತ್ತು ಸಂಬಂಧಿತ ಕಾನೂನುಗಳ ಅಧ್ಯಯನ ಕೇಂದ್ರ (ಸಿಎಎಎಲ್) ಇಂದು ತನ್ನ ಅಧಿಕೃತ ವೆಬ್‌ಸೈಟ್ ಬಿಡುಗಡೆಗೊಳಿಸಿತು.
ಹೆಬ್ಬಾಳದ ಹಯಾತ್ ಸೆಂಟ್ರಿಕ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರು ವೆಬ್‌ಸೈಟ್ (https://www.caal.in.net) ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನ ದೇಶ. ಬಹುಸಂಖ್ಯಾತ ಜನರು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಅವಲಂಬಿಸಿದ್ದು, ಅದನ್ನೇ ತಮ್ಮ ಜೀವನೋಪಾಯ ಮಾಡಿಕೊಂಡಿದ್ದಾರೆ. ಹೀಗಾಗಿ ರೈತರು, ಕೃಷಿ, ಪರಿಸರ ವಿಜ್ಞಾನ ಮತ್ತು ಕೃಷಿ ವ್ಯವಹಾರಗಳು ಸುಸ್ಥಿರ ಆಗುವ ಬಗ್ಗೆ ದೃಷ್ಟಿಕೋನದಿಂದ ಕಾನೂನು ಸಹ ತನ್ನ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು.
ಕೃಷಿ ಮತ್ತು ಅದಕ್ಕೆ ಪೂರಕವಾದ ಕಾನೂನುಗಳ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಆರಂಭಿಸಿರುವುದೇ ದೊಡ್ಡ ಪ್ರಯತ್ನ. ಇದರಿಂದ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಕಾನೂನಾತ್ಮಕ ಬೆಂಬಲ ನೀಡಿದಂತಾಗುತ್ತದೆ. ಈ ಸಿಎಎಲ್‌ಎಲ್ ಕೇಂದ್ರವನ್ನು ಯಶಸ್ವಿಯಾಗಿ ನಡೆಸುತ್ತಾ, ಈಗ ಅದನ್ನು ಮತ್ತಷ್ಟು ಜನರಿಗೆ ತಲುಪಿಸಲು ವೆಬ್‌ಸೈಟ್ ರೂಪಿಸಿ ವಿಸ್ತರಿಸಿರುವ ಕಾರ್ಯವನ್ನು ಶ್ಲಾಘಿಸಿ, ಇದರ ಹಿಂದಿನ ಕತೃಗಳಾದ ಬಿ. ವೆಂಕಟರವಣಪ್ಪ ಮತ್ತು ನಿತಿನ್ ರಮೇಶ್ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಿಎಎಎಲ್ ಸಂಸ್ಥಾಪಕರಾದ ಬಿ.ವೆಂಕಟರವಣಪ್ಪ, ನಿಮಿಷ ಕುಮಾರ್, ನಿತಿನ್ ರಮೇಶ್, ಮಾನಸಿ ಶರ್ಮಾ ಸೇರಿ ಹಲವರು ಉಪಸ್ಥಿತರಿದ್ದರು.