ಬೆಂಗಳೂರು: ಖಾಸಗಿ ವಲಯದ ಉದ್ಯೋಗಿಗಳ PFಗೆ ಸಂಬಂಧಿಸಿದಂತೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಹೊಸ ಬದಲಾವಣೆ ತಂದಿದೆ. ಕಡ್ಡಾಯ EPF ವ್ಯಾಪ್ತಿಗೆ ಅನ್ವಯಿಸುವ ವೇತನ ಮಿತಿಯನ್ನು ತಿಂಗಳಿಗೆ ₹15,000ರಿಂದ ₹25,000ಕ್ಕೆ ಹೆಚ್ಚಿಸಲಾಗಿದೆ. ಈ ಬದಲಾವಣೆ ಸೆಪ್ಟೆಂಬರ್ 17, 2026ರಿಂದ ಜಾರಿಗೆ ಬಂದಿದೆ.
ತಿಂಗಳ ಮಧ್ಯದಲ್ಲೇ ನಿಯಮ ಬದಲಾಗಿರುವುದರಿಂದ ಸೆಪ್ಟೆಂಬರ್ ತಿಂಗಳ PF ಮತ್ತು EPS ಕೊಡುಗೆ ಹೇಗೆ ಲೆಕ್ಕವಾಗುತ್ತದೆ ಎಂಬ ಪ್ರಶ್ನೆ ಉದ್ಯೋಗಿಗಳಲ್ಲಿದೆ. ಸೆಪ್ಟೆಂಬರ್‌ನ್ನು ಪರಿವರ್ತನಾ ತಿಂಗಳಾಗಿ ಪರಿಗಣಿಸಿ, ಉದ್ಯೋಗಿಯ ಹಿಂದಿನ PF ಸ್ಥಿತಿಗೆ ಅನುಗುಣವಾಗಿ ಮೂರು ರೀತಿಯಲ್ಲಿ ಲೆಕ್ಕಾಚಾರ ಮಾಡಲಾಗಿದೆ.
ಸೆಪ್ಟೆಂಬರ್ 17ರಿಂದ ಹೊಸದಾಗಿ EPF ವ್ಯಾಪ್ತಿಗೆ ಬಂದರೆ
ಈ ಹಿಂದೆ ₹15,000ಕ್ಕಿಂತ ಹೆಚ್ಚಿನ ಮೂಲ ವೇತನ ಹೊಂದಿದ್ದ ಕಾರಣ ಕಡ್ಡಾಯ EPF ವ್ಯಾಪ್ತಿಯಿಂದ ಹೊರಗಿದ್ದ ಉದ್ಯೋಗಿಗಳು, ಹೊಸ ₹25,000 ಮಿತಿ ಜಾರಿಯಾದ ಬಳಿಕ EPF ಸದಸ್ಯರಾಗಬಹುದು.
ಉದಾಹರಣೆಗೆ ತಿಂಗಳಿಗೆ ₹20,000 ಮೂಲ ವೇತನ ಪಡೆಯುವ ಉದ್ಯೋಗಿಯನ್ನು ತೆಗೆದುಕೊಂಡರೆ, ಸೆಪ್ಟೆಂಬರ್ 1ರಿಂದ 16ರವರೆಗೆ ಹಳೆಯ ₹15,000 ಮಿತಿ ಅನ್ವಯಿಸುತ್ತದೆ. ಸೆಪ್ಟೆಂಬರ್ 17ರಿಂದ 30ರವರೆಗೆ ಹೊಸ ನಿಯಮದಂತೆ ಲೆಕ್ಕ ಹಾಕಲಾಗುತ್ತದೆ.
ಈ 14 ದಿನಗಳ ಪರಿಗಣಿತ ವೇತನ ₹9,333.33 ಆಗುತ್ತದೆ. ಇದರ 12%ರಂತೆ ಉದ್ಯೋಗಿಯ ಪಾಲಿನ ₹1,120 PFಗೆ ಹೋಗುತ್ತದೆ.
ಉದ್ಯೋಗದಾತರ ಪಾಲಿನಲ್ಲಿ 3.67%ರಂತೆ ಸುಮಾರು ₹342.53 PFಗೆ ಮತ್ತು 8.33%ರಂತೆ ₹777.47 EPSಗೆ ಜಮೆಯಾಗುತ್ತದೆ. ಉದ್ಯೋಗಿ ಮತ್ತು ಉದ್ಯೋಗದಾತರ PF/EPS ಕೊಡುಗೆ ಸೇರಿ ಒಟ್ಟು ₹2,240 ಆಗುತ್ತದೆ. ಇದರ ಜೊತೆಗೆ EDLI ವಿಮಾ ಕೊಡುಗೆಯೂ ಅನ್ವಯಿಸುತ್ತದೆ.
ಈಗಾಗಲೇ EPFನಲ್ಲಿದ್ದು, EPSಗೆ ಹೊಸದಾಗಿ ಸೇರಿದರೆ
ಕೆಲವು ಉದ್ಯೋಗಿಗಳು ಈಗಾಗಲೇ EPF ಸದಸ್ಯರಾಗಿದ್ದರೂ EPS ವ್ಯಾಪ್ತಿಗೆ ಬಂದಿರದಿರಬಹುದು. ಹೊಸ ವೇತನ ಮಿತಿ ಜಾರಿಯಾದ ಬಳಿಕ ಅರ್ಹರಾಗುವವರು EPSಗೂ ಸೇರ್ಪಡೆಯಾಗಬಹುದು.₹20,000 ಮೂಲ ವೇತನದ ಉದಾಹರಣೆಯಲ್ಲಿ ಉದ್ಯೋಗಿಯ 12% ಕೊಡುಗೆ ₹2,400 ಆಗುತ್ತದೆ.
ಸೆಪ್ಟೆಂಬರ್ 1ರಿಂದ 16ರವರೆಗೆ ಉದ್ಯೋಗದಾತರ 12% ಕೊಡುಗೆ ₹1,280. ಸೆಪ್ಟೆಂಬರ್ 17ರಿಂದ 30ರವರೆಗೆ ಅದರಲ್ಲಿ ₹342.53 PFಗೆ ಮತ್ತು ₹777.47 EPSಗೆ ವರ್ಗಾವಣೆಯಾಗುತ್ತದೆ.ಹೀಗಾಗಿ ಉದ್ಯೋಗಿಯ ₹2,400 ಮತ್ತು ಉದ್ಯೋಗದಾತರ ₹2,400 ಕೊಡುಗೆ ಸೇರಿ ಒಟ್ಟು ₹4,800 ಜಮೆಯಾಗುತ್ತದೆ.
ಈಗಾಗಲೇ EPF ಮತ್ತು EPS ಎರಡರಲ್ಲೂ ಇದ್ದರೆ
ಈಗಾಗಲೇ EPF ಮತ್ತು EPS ಸದಸ್ಯರಾಗಿರುವ ಉದ್ಯೋಗಿಗಳ ಸೆಪ್ಟೆಂಬರ್ ಲೆಕ್ಕಾಚಾರದಲ್ಲಿ ಹಳೆಯ ಹಾಗೂ ಹೊಸ ಮಿತಿಯನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ.
₹20,000 ಮೂಲ ವೇತನ ಹೊಂದಿರುವ ಉದ್ಯೋಗಿಗೆ ಸೆಪ್ಟೆಂಬರ್ 1ರಿಂದ 16ರವರೆಗೆ ಹಳೆಯ ₹15,000 ಮಿತಿಯ ಆಧಾರದ ಮೇಲೆ ₹8,000 ಪರಿಗಣಿತ ವೇತನವಾಗುತ್ತದೆ.
ಸೆಪ್ಟೆಂಬರ್ 17ರಿಂದ 30ರವರೆಗೆ ₹20,000 ಮೂಲ ವೇತನದ ಆಧಾರದ ಮೇಲೆ ₹9,333.33 ಪರಿಗಣಿಸಲಾಗುತ್ತದೆ.
ಹೀಗಾಗಿ ಸೆಪ್ಟೆಂಬರ್ ತಿಂಗಳ ಒಟ್ಟು ಪರಿಗಣಿತ ವೇತನ ₹17,333.33 ಆಗುತ್ತದೆ. ಇದರ ಆಧಾರದ ಮೇಲೆ PF ಮತ್ತು EPS ಕೊಡುಗೆಗಳನ್ನು ಲೆಕ್ಕ ಹಾಕಲಾಗುತ್ತದೆ.
ಅಕ್ಟೋಬರ್‌ನಿಂದ ಲೆಕ್ಕ ಹೇಗೆ?
ಸೆಪ್ಟೆಂಬರ್ ತಿಂಗಳು ಪರಿವರ್ತನಾ ಅವಧಿಯಾಗಿರುವುದರಿಂದ 1ರಿಂದ 16ರವರೆಗೆ ಹಳೆಯ ಮಿತಿ ಮತ್ತು 17ರಿಂದ ಹೊಸ ಮಿತಿಯ ಆಧಾರದ ಮೇಲೆ ಲೆಕ್ಕಾಚಾರ ನಡೆಯುತ್ತದೆ.
ಅಕ್ಟೋಬರ್ 1ರಿಂದ ಪೂರ್ಣ ತಿಂಗಳಿಗೆ ಅನ್ವಯಿಸುವ ಹೊಸ ₹25,000 ವೇತನ ಮಿತಿಯ ಆಧಾರದ ಮೇಲೆ PF ಸಂಬಂಧಿತ ಲೆಕ್ಕಾಚಾರ ನಡೆಯಲಿದೆ.
ಹೀಗಾಗಿ ಉದ್ಯೋಗಿಯ ಮೂಲ ವೇತನ, ಈಗಾಗಲೇ ಇರುವ EPF/EPS ಸದಸ್ಯತ್ವ ಮತ್ತು ಹೊಸ ನಿಯಮದಡಿ ಬರುವ ಅರ್ಹತೆಯ ಆಧಾರದ ಮೇಲೆ ಸೆಪ್ಟೆಂಬರ್ ತಿಂಗಳ PF ಹಾಗೂ EPS ಕೊಡುಗೆಯಲ್ಲಿ ವ್ಯತ್ಯಾಸವಾಗಬಹುದು.