ಉದ್ಯೋಗಿಗಳ ರಾಜ್ಯ ವಿಮಾ (ESI) ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಕಾರ್ಮಿಕರು ಹಾಗೂ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಇಎಸ್‌ಐ ಸೇವೆಗಳನ್ನು ಡಿಜಿಟಲ್ ಮೂಲಕ ಒದಗಿಸಲಾಗುತ್ತಿದ್ದು, ಪ್ರಸೂತಿ ಹಾಗೂ ಅನಾರೋಗ್ಯದ ಸಂದರ್ಭದಲ್ಲಿ ದೊರೆಯುವ ನಗದು ಪ್ರಯೋಜನಗಳನ್ನು ನೇರವಾಗಿ ಉದ್ಯೋಗಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೆ ಬಂದಿದೆ.
ಈ ಹೊಸ ನಿಯಮಗಳು ನವೆಂಬರ್ 20, 2026ರಿಂದ ಜಾರಿಗೆ ಬಂದಿದ್ದು, ಹಳೆಯ ಕಾರ್ಮಿಕರ ರಾಜ್ಯ ವಿಮಾ ನಿಯಮಗಳು-1950ರ ಬದಲಿಗೆ ಕಾರ್ಮಿಕರ ರಾಜ್ಯ ವಿಮಾ ನಿಯಮಗಳು-2026 ಜಾರಿಗೊಳಿಸಲಾಗಿದೆ.
ಇಎಸ್‌ಐ ಸೇವೆಗಳು ಸಂಪೂರ್ಣ ಡಿಜಿಟಲ್
ಹೊಸ ನಿಯಮದ ಪ್ರಕಾರ, ಇಎಸ್‌ಐ ಕಾರ್ಡ್ ವಿತರಣೆ, ಉದ್ಯೋಗಿಗಳ ನೋಂದಣಿ ಹಾಗೂ ವಿವಿಧ ಪ್ರಯೋಜನಗಳ ಕ್ಲೇಮ್ ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕವೇ ನಿರ್ವಹಿಸಲಾಗುತ್ತದೆ. ಪ್ರಸೂತಿ ಹಾಗೂ ಅನಾರೋಗ್ಯದ ಪ್ರಯೋಜನಗಳನ್ನು ಪಡೆಯಲು ಉದ್ಯೋಗಿಗಳು ಪ್ರತ್ಯೇಕವಾಗಿ ಕ್ಲೇಮ್ ಸಲ್ಲಿಸುವ ಅಗತ್ಯವಿಲ್ಲ. ಉದ್ಯೋಗದಾತರು ಸಲ್ಲಿಸುವ ಅರ್ಜಿ ಹಾಗೂ ವೈದ್ಯಕೀಯ ಪ್ರಮಾಣಪತ್ರಗಳ ಆಧಾರದ ಮೇಲೆ ಅರ್ಹ ಮೊತ್ತವನ್ನು ನೇರವಾಗಿ ಉದ್ಯೋಗಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಕಡ್ಡಾಯ
ಇಎಸ್‌ಐ ಯೋಜನೆಯಡಿ ಪ್ರಯೋಜನ ಪಡೆಯಲು ಉದ್ಯೋಗಿಗಳು ತಮ್ಮ ಇಎಸ್‌ಐ ಖಾತೆಗೆ ಆಧಾರ್ ಹಾಗೂ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹೊಸದಾಗಿ ಇಎಸ್‌ಐ ವ್ಯಾಪ್ತಿಗೆ ಬಂದ ಉದ್ಯೋಗಿಗಳು ಈ ಪ್ರಯೋಜನಗಳನ್ನು ಪಡೆಯಲು 9 ತಿಂಗಳ ಕೊಡುಗೆ ಅವಧಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.
ಉದ್ಯೋಗಿಗಳ ನೋಂದಣಿ ಜವಾಬ್ದಾರಿಯನ್ನು ಕಂಪನಿಗಳು ಹಾಗೂ ಉದ್ಯೋಗದಾತರಿಗೆ ನೀಡಲಾಗಿದೆ. ಉದ್ಯೋಗಿಯ ಫೋಟೋ ಮತ್ತು ಕುಟುಂಬ ಸದಸ್ಯರ ವಿವರಗಳೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಡಿಜಿಟಲ್ ಇಎಸ್‌ಐ ಕಾರ್ಡ್ ಸೃಷ್ಟಿಯಾಗಲಿದೆ.
ಕಂಪನಿಗಳಿಗೂ ಹೊಸ ನಿಯಮ
ಉದ್ಯೋಗದಾತರು ಪ್ರತಿ ತಿಂಗಳ ಇಎಸ್‌ಐ ಕೊಡುಗೆಯನ್ನು ತಿಂಗಳು ಮುಗಿದ 15 ದಿನಗಳೊಳಗೆ ಪಾವತಿಸಬೇಕು. ನಿಗದಿತ ಸಮಯದಲ್ಲಿ ಪಾವತಿಸದಿದ್ದರೆ ಬಾಕಿ ಮೊತ್ತದ ಮೇಲೆ ತಿಂಗಳಿಗೆ ಶೇ.1ರಷ್ಟು ದಂಡ ವಿಧಿಸಲಾಗುತ್ತದೆ.
34 ಗಂಭೀರ ಕಾಯಿಲೆಗಳಿಗೂ ವೈದ್ಯಕೀಯ ಸೌಲಭ್ಯ
ಹೊಸ ನಿಯಮದಡಿ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಲು ವೈದ್ಯರ ಪ್ರಮಾಣಪತ್ರ ಕಡ್ಡಾಯವಾಗಿರುತ್ತದೆ. ಕ್ಷಯರೋಗ (ಟಿಬಿ), ಕ್ಯಾನ್ಸರ್, ಏಡ್ಸ್, ಹೃದಯ ಕಾಯಿಲೆಗಳು, ದೀರ್ಘಕಾಲದ ಮೂತ್ರಪಿಂಡ ವೈಫಲ್ಯ ಹಾಗೂ ಪಾರ್ಶ್ವವಾಯು ಸೇರಿದಂತೆ 34 ಗಂಭೀರ ಕಾಯಿಲೆಗಳನ್ನು ವೈದ್ಯಕೀಯ ಸೌಲಭ್ಯದ ವ್ಯಾಪ್ತಿಗೆ ಸೇರಿಸಲಾಗಿದೆ.
ಇನ್ನು, ಇಎಸ್‌ಐ ವ್ಯಾಪ್ತಿಯ ಉದ್ಯೋಗಿ ಮೃತಪಟ್ಟರೆ, ಅವರ ಕುಟುಂಬ ಸದಸ್ಯರಿಗೆ ಮೂರು ತಿಂಗಳೊಳಗೆ ಸಂಬಂಧಿತ ಪ್ರಯೋಜನಗಳನ್ನು ಪಾವತಿಸಬೇಕು ಎಂಬ ನಿಯಮವನ್ನೂ ಜಾರಿಗೆ ತರಲಾಗಿದೆ.
ಇಎಸ್‌ಐ ಕಾರ್ಡ್ ಹೊಂದಿರುವ ಉದ್ಯೋಗಿಗಳಿಗೆ ಇನ್ಮುಂದೆ ಪ್ರಸೂತಿ ಹಾಗೂ ಅನಾರೋಗ್ಯದ ಸಂದರ್ಭಗಳಲ್ಲಿ ಸಿಗುವ ನಗದು ಪ್ರಯೋಜನಗಳಿಗಾಗಿ ಅಲೆದಾಡಬೇಕಿಲ್ಲ. ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳಿಗೆ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಇದರ ಜೊತೆಗೆ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಇಎಸ್‌ಐ ಸೇವೆಗಳನ್ನೂ ಸಂಪೂರ್ಣ ಡಿಜಿಟಲ್ ವ್ಯವಸ್ಥೆಗೆ ಬದಲಾಯಿಸಲಾಗಿದೆ.