ತುರ್ತು ಸಂದರ್ಭದಲ್ಲಿ ಕೈಯಲ್ಲಿ ಹಣವಿಲ್ಲದಿದ್ದರೆ ವೈಯಕ್ತಿಕ ಸಾಲ (Personal Loan) ಅನೇಕರಿಗೆ ನೆರವಾಗುತ್ತದೆ. ಮನೆ ರಿಪೇರಿ, ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣ ಅಥವಾ ಅನಿವಾರ್ಯ ಖರ್ಚುಗಳಿಗಾಗಿ ಬ್ಯಾಂಕ್‌ನಿಂದ ಸಾಲ ಪಡೆಯುವವರು ಮಾಸಿಕ EMI ಎಷ್ಟು ಬರುತ್ತದೆ ಎಂಬುದನ್ನು ಮೊದಲೇ ಲೆಕ್ಕ ಹಾಕುತ್ತಾರೆ. ಅದರಲ್ಲೂ ₹1 ಲಕ್ಷ ಸಾಲ ಪಡೆದರೆ ತಿಂಗಳಿಗೆ ಎಷ್ಟು ಪಾವತಿಸಬೇಕು, ಎಷ್ಟು ವರ್ಷ ಸಾಲ ಮುಂದುವರಿಸಿದರೆ ಬಡ್ಡಿ ಕಡಿಮೆಯಾಗುತ್ತದೆ ಎಂಬ ಗೊಂದಲ ಹಲವರಲ್ಲಿರುತ್ತದೆ.
ದೇಶದ ಪ್ರಮುಖ ಸರ್ಕಾರಿ ಬ್ಯಾಂಕ್ ಎಸ್‌ಬಿಐನಲ್ಲಿ ವೈಯಕ್ತಿಕ ಸಾಲ ಪಡೆದರೆ ಬಡ್ಡಿದರ, ಸಾಲದ ಅವಧಿ ಹಾಗೂ ಕ್ರೆಡಿಟ್ ಸ್ಕೋರ್ ಆಧರಿಸಿ EMI ಬದಲಾಗುತ್ತದೆ. ಹಾಗಾದರೆ ₹1 ಲಕ್ಷ ಸಾಲಕ್ಕೆ 10%, 12% ಮತ್ತು 15% ಬಡ್ಡಿದರದಲ್ಲಿ ಎಷ್ಟು ಕಂತು ಪಾವತಿಸಬೇಕು? ದೀರ್ಘಾವಧಿಯ ಸಾಲ ಆಯ್ಕೆ ಮಾಡಿದರೆ ನಿಜಕ್ಕೂ ಲಾಭವಾಗುತ್ತದೆಯೇ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ.
₹1 ಲಕ್ಷ ವೈಯಕ್ತಿಕ ಸಾಲ ಪಡೆದರೆ EMI ಎಷ್ಟು?
ಎಸ್‌ಬಿಐ ವೈಯಕ್ತಿಕ ಸಾಲದ ಬಡ್ಡಿದರ ಗ್ರಾಹಕರ ವೇತನ, ಕ್ರೆಡಿಟ್ ಸ್ಕೋರ್, ಉದ್ಯೋಗದ ಸ್ವರೂಪ ಹಾಗೂ ಬ್ಯಾಂಕಿನ ನಿಯಮಗಳನ್ನು ಆಧರಿಸಿ ನಿರ್ಧಾರವಾಗುತ್ತದೆ. ಸಾಲಕ್ಕೆ ಯಾವುದೇ ಆಸ್ತಿಯನ್ನು ಅಡಮಾನ ಇಡುವ ಅಗತ್ಯವಿಲ್ಲದಿದ್ದರೂ, ಇತರ ಸಾಲಗಳಿಗೆ ಹೋಲಿಸಿದರೆ ವೈಯಕ್ತಿಕ ಸಾಲದ ಬಡ್ಡಿದರ ತುಸು ಹೆಚ್ಚಿರಬಹುದು.
ನೀವು ₹1 ಲಕ್ಷ ಸಾಲ ಪಡೆದು ವಾರ್ಷಿಕ ಶೇ.10, ಶೇ.12 ಅಥವಾ ಶೇ.15 ಬಡ್ಡಿದರದಲ್ಲಿ ಮರುಪಾವತಿ ಮಾಡಿದರೆ, ಸಾಲದ ಅವಧಿಗೆ ಅನುಗುಣವಾಗಿ ನಿಮ್ಮ ಮಾಸಿಕ EMI ಎಷ್ಟಿರುತ್ತದೆ ಎಂಬುದನ್ನು ಕೆಳಗಿನ ಪಟ್ಟಿಯಲ್ಲಿ ನೋಡಬಹುದು.
₹1 ಲಕ್ಷ ಸಾಲದ ಮಾಸಿಕ EMI ಲೆಕ್ಕಾಚಾರ
₹1 ಲಕ್ಷ ವೈಯಕ್ತಿಕ ಸಾಲವನ್ನು ಶೇ.10ರ ಬಡ್ಡಿದರದಲ್ಲಿ 1 ವರ್ಷಕ್ಕೆ ಪಡೆದರೆ ಮಾಸಿಕ EMI ₹8,792, 2 ವರ್ಷಕ್ಕೆ ₹4,614, 3 ವರ್ಷಕ್ಕೆ ₹3,227, 4 ವರ್ಷಕ್ಕೆ ₹2,536 ಹಾಗೂ 5 ವರ್ಷಕ್ಕೆ ₹2,125 ಪಾವತಿಸಬೇಕಾಗುತ್ತದೆ.
ಅದೇ ಸಾಲವನ್ನು ಶೇ.12ರ ಬಡ್ಡಿದರದಲ್ಲಿ ಪಡೆದರೆ, 1 ವರ್ಷಕ್ಕೆ ₹8,885, 2 ವರ್ಷಕ್ಕೆ ₹4,707, 3 ವರ್ಷಕ್ಕೆ ₹3,321, 4 ವರ್ಷಕ್ಕೆ ₹2,633 ಹಾಗೂ 5 ವರ್ಷಕ್ಕೆ ₹2,224 ಮಾಸಿಕ EMI ಬರಲಿದೆ. ಇನ್ನು ಶೇ.15ರ ಬಡ್ಡಿದರದಲ್ಲಿ ₹1 ಲಕ್ಷ ಸಾಲ ಪಡೆದರೆ, 1 ವರ್ಷದ ಅವಧಿಗೆ ₹9,026, 2 ವರ್ಷಕ್ಕೆ ₹4,849, 3 ವರ್ಷಕ್ಕೆ ₹3,467, 4 ವರ್ಷಕ್ಕೆ ₹2,783 ಹಾಗೂ 5 ವರ್ಷಕ್ಕೆ ₹2,379 ಮಾಸಿಕ ಕಂತು ಪಾವತಿಸಬೇಕಾಗುತ್ತದೆ.
ಉದಾಹರಣೆಗೆ, ಶೇ.12ರ ಬಡ್ಡಿದರದಲ್ಲಿ ₹1 ಲಕ್ಷ ಸಾಲ ಪಡೆದು 3 ವರ್ಷಗಳಲ್ಲಿ ಮರುಪಾವತಿ ಮಾಡಿದರೆ ಪ್ರತಿ ತಿಂಗಳು ಸುಮಾರು ₹3,321 EMI ಪಾವತಿಸಬೇಕಾಗುತ್ತದೆ. ಅದೇ ಸಾಲವನ್ನು ಶೇ.15ರ ಬಡ್ಡಿದರದಲ್ಲಿ ಪಡೆದರೆ ಮಾಸಿಕ ಕಂತು ₹3,467ಕ್ಕೆ ಏರಿಕೆಯಾಗುತ್ತದೆ.
EMI ಕಡಿಮೆಯಾದರೆ ಸಾಲ ಅಗ್ಗವಾಗುತ್ತದೆಯೇ?
ಸಾಲದ ಅವಧಿಯನ್ನು ಹೆಚ್ಚಿಸಿದರೆ ಮಾಸಿಕ EMI ಕಡಿಮೆಯಾಗುತ್ತದೆ. ಇದರಿಂದ ಪ್ರತಿ ತಿಂಗಳ ಹಣಕಾಸಿನ ಹೊರೆ ತಗ್ಗಿದಂತೆ ಅನಿಸಬಹುದು. ಆದರೆ ಸಾಲದ ಅವಧಿ ಹೆಚ್ಚಿದಂತೆ ಒಟ್ಟು ಬಡ್ಡಿ ಪಾವತಿ ಹೆಚ್ಚಾಗುತ್ತದೆ. ಹೀಗಾಗಿ ಕಡಿಮೆ EMI ನೋಡಿ ದೀರ್ಘಾವಧಿಯ ಸಾಲ ಆಯ್ಕೆ ಮಾಡುವ ಮುನ್ನ ಒಟ್ಟಾರೆ ಎಷ್ಟು ಹಣ ಪಾವತಿಸಬೇಕಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.
ಸಾಲ ಪಡೆಯುವ ಮುನ್ನ ಈ ಅಂಶಗಳನ್ನು ಮರೆಯಬೇಡಿ
ವೈಯಕ್ತಿಕ ಸಾಲ ಪಡೆಯುವಾಗ ನಿಮ್ಮ ಮಾಸಿಕ ಆದಾಯ, ಮನೆಯ ಖರ್ಚು, ಈಗಾಗಲೇ ಇರುವ ಸಾಲಗಳು ಹಾಗೂ ಇತರ ಹಣಕಾಸಿನ ಜವಾಬ್ದಾರಿಗಳನ್ನು ಲೆಕ್ಕ ಹಾಕಿ EMI ಆಯ್ಕೆ ಮಾಡಿಕೊಳ್ಳಿ. ಪ್ರತಿ ತಿಂಗಳು ಸುಲಭವಾಗಿ ಪಾವತಿಸಬಹುದಾದ ಕಂತು ನಿಗದಿಪಡಿಸುವುದು ಮುಖ್ಯ.
ಅಲ್ಲದೆ, ಸಾಲ ಪಡೆಯುವ ಮುನ್ನ ಬ್ಯಾಂಕ್ ವಿಧಿಸುವ ಪ್ರೊಸೆಸಿಂಗ್ ಶುಲ್ಕ, ಇತರ ಚಾರ್ಜ್‌ಗಳು ಹಾಗೂ ಮುಂಗಡ ಸಾಲ ಮರುಪಾವತಿ (Prepayment) ನಿಯಮಗಳನ್ನು ಪರಿಶೀಲಿಸಿ. ಕಡಿಮೆ EMI ಆಸೆಗಾಗಿ ಹೆಚ್ಚು ವರ್ಷ ಸಾಲ ಮುಂದುವರಿಸುವ ಬದಲು, ನಿಮ್ಮ ಆರ್ಥಿಕ ಪರಿಸ್ಥಿತಿಗೆ ಹೊಂದುವ ಅವಧಿಯನ್ನು ಆಯ್ಕೆ ಮಾಡಿದರೆ ಅನಗತ್ಯ ಬಡ್ಡಿ ಹೊರೆ ತಪ್ಪಿಸಬಹುದು.