ಹಾಸನ : ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ಸಂಪೂರ್ಣ ಸಿದ್ಧತೆಯೊಂದಿಗೆ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಜನರ ಮುಂದೆ ಬರುವುದಾಗಿ ಸ್ಪಷ್ಟಪಡಿಸಿದ್ದಾರೆ. ತಾವು ನೀಡಿರುವ ಪ್ರತಿಯೊಂದು ಹೇಳಿಕೆಗೂ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಹೆಜ್ಜೆಯನ್ನು ಹಿಂದೆ ಇಡುವುದಿಲ್ಲ ಎಂದು ಅವರು ಪ್ರಕಟಿಸಿದರು.
ಸಿಎಂ ವಿರುದ್ಧ ಪಿತೂರಿ ಆರೋಪ ನೈಸ್ ಗುತ್ತಿಗೆದಾರರು ಹಾಗೂ ಮುಖ್ಯಮಂತ್ರಿಗಳು ನಡೆಸಿದ ಭೇಟಿಯನ್ನು ತಾವು ಗಮನಿಸಿರುವುದಾಗಿ ಹೇಳಿದ ಸಚಿವರು, ನಮ್ಮ ವಿರುದ್ಧ ನಡೆಯುತ್ತಿರುವ ಪ್ರತಿಯೊಂದು ಪಿತೂರಿಗೂ ಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಮುಖ್ಯ ಕಾರಣ ಎಂದು ನೇರ ಆರೋಪ ಮಾಡಿದರು. ಪ್ರಸ್ತುತ ಏನೇನು ನಡೆಯುತ್ತಿದೆ ಎಂಬುದಕ್ಕೆ ಮುಂಬರುವ ದಿನಗಳಲ್ಲಿ ಕಾಲವೇ ಸೂಕ್ತ ಉತ್ತರ ನೀಡಲಿದೆ. ಅಮೆರಿಕಕ್ಕೆ ಹೋಗುವ ಮೊದಲು ಎತ್ತಿದ್ದ ಪ್ರಶ್ನೆಗಳಿಗೆ ಕಳೆದ 10 ದಿನಗಳಿಂದ ಯಾರಿಂದಲೂ ಯಾವುದೇ ಉತ್ತರ ಬಂದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳು ಹಾಗೂ ಸರ್ಕಾರದ ವೈಫಲ್ಯ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮಗಳು ನಾಲ್ಕು ಮುಖ್ಯ ಪಿಲ್ಲರ್‌ಗಳಿದ್ದಂತೆ ಎಂದು ಅಭಿಪ್ರಾಯಪಟ್ಟ ಅವರು, ಯಾವುದೇ ವಿಚಾರದ ಸತ್ಯ ಪರಾಮರ್ಶೆ ಮಾಡುವುದು ಈ ನಾಲ್ಕು ಅಂಗಗಳಿಗೆ ಬಿಟ್ಟದ್ದು ಎಂದರು. ತಾವು ರಾಜ್ಯ ಸರ್ಕಾರದ ವಿರುದ್ಧ ಯಾವುದೇ ವಿಚಾರ ಪ್ರಸ್ತಾಪ ಮಾಡಿದರೂ ಅದು ವೈಯಕ್ತಿಕ ಅಸೂಯೆಯಿಂದ ಮಾಡಿದ್ದಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜನರ ಪರವಾಗಿ ಸರ್ಕಾರ ಕೆಲಸ ಮಾಡಿದರೆ ಸಂಪೂರ್ಣ ಬೆಂಬಲ ನೀಡುತ್ತೇನೆ, ಆದರೆ ಅಧಿಕಾರ ದುರ್ಬಳಕೆ ಮಾಡಿಕೊಂಡರೆ ಖಂಡಿತವಾಗಿ ಧ್ವನಿ ಎತ್ತಲೇಬೇಕಾಗುತ್ತದೆ ಎಂದು ತಿಳಿಸಿದರು.
ಜಾತಿ ರಾಜಕಾರಣ ಮತ್ತು ದಾಖಲೆಗಳ ಆಧಾರಿತ ವಾಗ್ದಾಳಿ ನಮ್ಮ ಜಾತಿಯವರೊಬ್ಬರು ಮುಖ್ಯಮಂತ್ರಿಯಾಗಿದ್ದಾರೆ, ಅಧಿಕಾರ ನಡೆಸಲು ಬಿಡಿ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಅವರಿಗೆ ತೊಂದರೆ ಕೊಡಲು ನಾನು ಯಾವುದೇ ಕೃತ್ಯ ಎಸಗುವುದಿಲ್ಲ. ನನ್ನ ಬಗ್ಗೆ ಪರವಾಗಿ ಮಾತನಾಡಲಿ ಅಥವಾ ಟೀಕೆ ಮಾಡಲಿ, ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಪ್ರಸ್ತುತ ಸರ್ಕಾರದಲ್ಲಿಯೇ ಅಕ್ರಮಗಳಾಗುತ್ತಿರುವಾಗ ಹಾಗೂ ನೇಮಕಾತಿ ಹಗರಣಗಳು ನಡೆಯುತ್ತಿರುವಾಗ ನಾನು ಬಾಯಿ ಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ. ಹುಟ್ಟಿದ ಪುಣ್ಯಭೂಮಿಯಲ್ಲಿ ಕುಳಿತು ಹೇಳುತ್ತಿದ್ದೇನೆ, ಯಾವುದೇ ದಾಖಲೆಗಳಿಲ್ಲದೆ ನಾನು ಮಾತನಾಡುವುದಿಲ್ಲ ಹಾಗೂ ಅಕ್ರಮಗಳನ್ನು ಜನರ ಮುಂದಿಡುವುದು ನನ್ನ ಜವಾಬ್ದಾರಿಯಾಗಿದೆ.
ಅಮೆರಿಕ ಪ್ರವಾಸ ಮತ್ತು ಕೆಪಿಎಸ್ಸಿ, ನೈಸ್ ಅಕ್ರಮಗಳು ಸುಮಾರು 15 ದಿನಗಳ ಅಮೆರಿಕ ಪ್ರವಾಸ ಮುಗಿಸಿ ವಾಪಸ್ ಬಂದಿರುವ ಕುಮಾರಸ್ವಾಮಿ, ಪ್ರವಾಸಕ್ಕೂ ಮುನ್ನವೇ ಕೆಪಿಎಸ್ಸಿ ಅಕ್ರಮಗಳು, ನೈಸ್ ರಸ್ತೆಯ ಹಗಲು ದರೋಡೆ ಹಾಗೂ ಬಿಡದಿ ವಿಚಾರಗಳನ್ನು ಪ್ರಸ್ತಾಪಿಸಿದ್ದಾಗಿ ನೆನಪಿಸಿದರು. ಅಮೆರಿಕದಿಂದ ಬಂದ ಬಳಿಕ ಹಲವು ಮಹತ್ವದ ಸಂಗತಿಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದೆ. ವಿರೋಧಿಗಳು ನನ್ನ ಬಗ್ಗೆ ಎಷ್ಟೇ ಲಘುವಾಗಿ ಮಾತನಾಡಿದರೂ ನಾನು ವಿಚಲಿತನಾಗುವುದಿಲ್ಲ. ಸೂಕ್ತ ಆಧಾರಗಳಿಲ್ಲದೆ ಮಾತನಾಡುವ ಅಭ್ಯಾಸ ನನಗಿಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.