ಬೆಂಗಳೂರು: ಧಾರವಾಡದ ಜಿಲ್ಲಾಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಪೊಲೀಸ್ ಅಧಿಕಾರಿ ಚನ್ನಕೇಶವ ಟಿಂಗರಿಕರ್ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ 7 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಜಾಮೀನು ಮಂಜೂರು ಮಾಡುವಂತೆ ಚನ್ನಕೇಶವ ಪರ ವಕೀಲರು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, ಸುಲಭವಾಗಿ ಜಾಮೀನು ಪರಿಗಣಿಸಲಾಗದು ಎಂದು ತಿಳಿಸಿದೆ.
ಅರ್ಜಿದಾರರ ಪರ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿದ್ದು, ಚನ್ನಕೇಶವ ಟಿಂಗರಿಕರ್ ಅವರಿಗೆ ಕೇವಲ 20 ದಿನ ಮಾತ್ರ ತನಿಖೆಯ ಹೊಣೆ ಇತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ವೇಳೆ ಅವರ ವಾದಕ್ಕೆ ಸಹಾಯಕ ಸಾಲಿಸಿಟರ್ ಜನರಲ್ (ASG) ಎಸ್.ವಿ.ರಾಜು ಆಕ್ಷೇಪ ವ್ಯಕ್ತಪಡಿಸಿದರು.
ಚನ್ನಕೇಶವ ಟಿಂಗರಿಕರ್ ತನಿಖಾಧಿಕಾರಿಯಾಗಿದ್ದ ಅವಧಿಯಲ್ಲಿ ಕೊಲೆ ಮಾಡಿದ ನಿಜವಾದ ಆರೋಪಿಗಳನ್ನು ಬಂಧಿಸಲಿಲ್ಲ. ಬದಲಿಗೆ, ಕೊಲೆಗೆ ಸಂಬಂಧವಿಲ್ಲದವರನ್ನು ಆರೋಪಿಗಳನ್ನಾಗಿಸುವಲ್ಲಿ ಈತನ ಪಾತ್ರವಿದೆ ಎಂದರು. ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದರೂ ಅವುಗಳನ್ನು ಪರಿಶೀಲಿಸಿಲ್ಲ. ಕೆಲ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪವೂ ಈತನ ಮೇಲಿದೆ. ಪೊಲೀಸ್ ಅಧಿಕಾರಿಯಾಗಿ ನ್ಯಾಯ ಕೊಡಿಸುವ ಕೆಲಸ ಮಾಡಿಲ್ಲವೆಂದು ಎಸ್.ವಿ. ರಾಜು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ಪಿ. ಶ್ರೀಸುಧಾ ಅವರಿದ್ದ ವಿಭಾಗೀಯ ಪೀಠ, ದೋಷಿ ಎಂದು ಈಗಾಗಲೇ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿರುವುದರಿಂದ ಜಾಮೀನನ್ನು ಸುಲಭವಾಗಿ ಪರಿಗಣಿಸಲಾಗದು. ಪೊಲೀಸ್ ಅಧಿಕಾರಿಯಾಗಿ ಆರೋಪಿಗಳೊಂದಿಗೆ ಶಾಮೀಲಾಗಿರುವ ಗಂಭೀರ ಆರೋಪವಿದೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೇ ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಿದೆ.