ಬೆಂಗಳೂರು: ಸಾಲವಾಗಿ ನೀಡಿದ್ದ 2000 ರೂ. ವಾಪಸ್ ಕೇಳಿದ್ದಕ್ಕೆ ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜ್ಞಾನಭಾರತಿ ಮೂಲದ ಮೋಹಿನ್ ಪಾಷಾ(22), ಹುಸೇನ್(22) ಬಂಧಿತ ಆರೋಪಿಗಳು. ತಾವರೆಕೆರೆ ನಿವಾಸಿ ರಕ್ಷಿತ್ ಕೊಲೆಯಾದ ವ್ಯಕ್ತಿ. ಆಟೋ ಚಾಲಕನಾಗಿದ್ದ ರಕ್ಷಿತ್ ಮೋಹಿನ್ ಗೆ ಹಣ ಕೊಟ್ಟಿದ್ದು, ಮೇ 24 ರಂದು ಸಂಜೆ ಹಣ ಪಡೆಯಲು ಕಂಬೀಪುರದ ಸ್ನೇಹಿತ ಮೋಹಿನ್ ನನ್ನು ಭೇಟಿಯಾಗಲು ಹೋಗಿದ್ದಾನೆ.
ಮನೆಯಲ್ಲಿ ಹೇಳಿ ಹೋಗಿದ್ದ ರಕ್ಷಿತ್ ರಾತ್ರಿಯಾದರೂ ಮನೆಗೆ ವಾಪಸ್ ಆಗದ ಕಾರಣ ಆತಂಕಗೊಂಡ ಆತನ ತಾಯಿ ಕಂಬೀಪುರಕ್ಕೆ ಹೋಗಿ ವಿಚಾರಿಸಿದ್ದಾರೆ. ಈ ವೇಳೆ ಕೊಲೆ ಮಾಡಿದ್ದಾಗಿ ಮೋಹಿನ್ ಹೇಳಿದ್ದಾನೆ. ನಂತರ ಅವರು ಕುಂಬಳಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಾಮಸಂದ್ರದ ಕೆರೆಯ ಬಳಿ ಹಣ ಕೇಳಲು ಬಂದಿದ್ದ ರಕ್ಷಿತ್ ಮೇಲೆ ತನ್ನ ಸಂಬಂಧಿ ಹುಸೇನ್ ಜತೆ ಸೇರಿ ಮೋಹಿನ್ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದು ಮೃತ ದೇಹವನ್ನು ಖಾಲಿ ಜಾಗದಲ್ಲಿ ಎಸೆದು ಪರಾರಿಯಾಗಿದ್ದಾನೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.