ಬೆಂಗಳೂರು: ರಾಜಧಾನಿ ಬೆಂಗಳೂರಿಗೂ ಎಬೋಲಾ ವೈರಸ್ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಉಗಾಂಡದಿಂದ ಬಂದಿದ್ದ 28 ವರ್ಷದ ಮಹಿಳೆಯಲ್ಲಿ ಎಬೋಲಾ ಪತ್ತೆ ಶಂಕೆ ವ್ಯಕ್ತವಾಗಿದ್ದು, ಹೋಟೆಲ್ ನಿಂದ ಐಸೋಲೇಷನ್ ಆಸ್ಪತ್ರೆಗೆ ಮಹಿಳೆಯನ್ನು ಶಿಫ್ಟ್ ಮಾಡಲಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ಗೆ ಬಂದಿದ್ದ ಮಹಿಳೆ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಆರೋಗ್ಯ ಇಲಾಖೆ ಆದೇಶದ ಮೇರೆಗೆ ಆಸ್ಪತ್ರೆಗೆ ಮಹಿಳೆಯನ್ನು ಸ್ಥಳಾಂತರ ಮಾಡಲಾಗಿದೆ. ಆಂಬುಲೆನ್ಸ್ ಮೂಲಕ ಐಸೋಲೇಷನ್ ಆಸ್ಪತ್ರೆಗೆ ಮಹಿಳೆಯನ್ನು ಶಿಫ್ಟ್ ಮಾಡಲಾಗಿದೆ. ಪರೀಕ್ಷೆಗಾಗಿ ಪುಣೆಯ ಲ್ಯಾಬ್ ಗೆ ಮಾದರಿಗಳನ್ನು ಕಳುಹಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ವರದಿಗಾಗಿ ಕಾಯುತ್ತಿದ್ದಾರೆ.
ಉಗಾಂಡಾ ದೇಶದ ಕ್ಯಾಂಪಾಲಾ ಮೂಲದ ಮಹಿಳೆ, ಕಳೆದ ಮೇ 23ರಂದು ಬೆಂಗಳೂರಿಗೆ ಆಗಮಿಸಿದ್ದರು. ಖಾಸಗಿ ಹೋಟೆಲ್‌ನ ರೂಮ್ ನಂಬರ್ 303ರಲ್ಲಿ ತಂಗಿದ್ದರು. ಮಹಿಳೆಗೆ ಎಬೋಲಾ ಮಾದರಿಯ ಆರೋಗ್ಯ ಸಮಸ್ಯೆಗಳು ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ, ತಕ್ಷಣವೇ ಆದೇಶ ಹೊರಡಿಸಿ ಇಂದು ಆಂಬುಲೆನ್ಸ್ ಮೂಲಕ ಅವರನ್ನು ಐಸೋಲೇಷನ್ಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಶಂಕಿತ ಮಹಿಳೆಯಿಂದ ಮೇ 25ರಂದೇ ರಕ್ತ ಹಾಗೂ ಇತರ ಅಗತ್ಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಸ್ಯಾಂಪಲ್‌ಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪುಣೆಯ ಲ್ಯಾಬ್‌ಗೆ ಕಳುಹಿಸಲಾಗಿದ್ದು, ವೈದ್ಯಕೀಯ ವರದಿಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಕಾಯುತ್ತಿದ್ದಾರೆ. ವರದಿ ಬಂದ ಬಳಿಕವಷ್ಟೇ ಮಹಿಳೆಗೆ ಎಬೋಲಾ ಸೋಂಕು ತಗುಲಿದೆಯೇ ಇಲ್ಲವೇ ಎಂಬುದು ಅಧಿಕೃತವಾಗಿ ದೃಢವಾಗಲಿದೆ.
ಎಬೋಲಾ ಸೋಂಕಿತ ರಾಷ್ಟ್ರಗಳಿಂದ ಬಂದವರಿಗೆ ಕ್ವಾರಂಟೈನ್ ನಲ್ಲಿಡಲು ಇತ್ತೀಚೆಗೆ ಮಾರ್ಗಸೂಚಿ ಹೊರಡಿಸಲಾಗಿತ್ತು. ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ 21 ದಿನ ಕ್ವಾರಂಟೈನ್ನಲ್ಲಿಡಲು ಸರ್ಕಾರ ನಿರ್ಧರಿಸಿತ್ತು. ರೋಗಲಕ್ಷಣ ಕಂಡು ಬಂದರೆ ಹತ್ತಿರದ ಆಸ್ಪತ್ರೆಗೆ ವರದಿ ನೀಡಲು ಮತ್ತು ತೀವ್ರ ನಿಗಾ ವ್ಯವಸ್ಥೆ ಮತ್ತು ಅನುಮಾನಾಸ್ಪದ ಪ್ರಕರಣಗಳ ಮೇಲ್ವಿಚಾರಣೆ ಮಾಡುವಂತೆ ಸೂಚಿಸಲಾಗಿತ್ತು.