ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಅನ್ವರ್ ಕಾಲೋನಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.
ಭದ್ರಾವತಿಯ ಹಳದಮ್ಮ ಬೀದಿ ನಿವಾಸಿ ವಿಶ್ವನಾಥ್(35) ಹಲ್ಲೆಗೊಳಗಾದ ಯುವಕ. ಭದ್ರಾವತಿಯ ಅನ್ವರ್ ಕಾಲೋನಿಯಲ್ಲಿ ಟೀ ಅಂಗಡಿಯೊಂದಕ್ಕೆ ಟೀ ಕುಡಿಯಲು ಹೋಗಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರಿಂದ ವಿಶ್ವನಾಥನ ಎರಡೂ ಕೈಗಳು ತುಂಡಾಗುವಷ್ಟು ಆಳದ ಗಾಯವಾಗಿವೆ. ಗಂಭೀರವಾಗಿ ಗಾಯಗೊಂಡಿದ್ದ ವಿಶ್ವನಾಥನಿಗೆ ಭದ್ರಾವತಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಭದ್ರಾವತಿ ಹಳೆನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.