ಪ್ರಸ್ತುತ ಕಾರ್ಪೊರೇಟ್ ವಲಯದಲ್ಲಿ ‘ಲೇ ಆಫ್’ (ಉದ್ಯೋಗ ಕಡಿತ) ಎಂಬ ಮಾತು ಕೇಳಿದರೆ ಸಾಕು, ಉದ್ಯೋಗಿಗಳು ಬೆಚ್ಚಿಬೀಳುತ್ತಾರೆ. ವರ್ಷಗಟ್ಟಲೆ ದುಡಿದ ಕಂಪನಿಯಿಂದ ದಿಢೀರನೆ ಪಿಂಕ್ ಸ್ಲಿಪ್ ಕೈಗಿಟ್ಟಾಗ ಆಕಾಶವೇ ತಲೆಮೇಲೆ ಬಿದ್ದಂತಾಗುತ್ತದೆ. ಆದರೆ, ಇಲ್ಲೊಬ್ಬ ಯುವಕನಿಗೆ ಕೆಲಸ ಹೋದ ಕೆಲವೇ ಗಂಟೆಗಳಲ್ಲಿ ಇಡೀ ಜೀವನವೇ ಬದಲಾಗುವಂತಹ ಅದೃಷ್ಟವೊಂದು ಹುಡುಕಿಕೊಂಡು ಬಂದಿದೆ. ಹೌದು, ಕಂಪನಿಯಿಂದ ಹೊರಬಿದ್ದ ದಿನವೇ ಆತನಿಗೆ ಹಳೆಯ ಸಂಬಳಕ್ಕಿಂತ ಎರಡರಷ್ಟು ಹೆಚ್ಚಿನ ಮೊತ್ತದ, ಅದೂ ಅಮೆರಿಕನ್ ಡಾಲರ್‌ನಲ್ಲಿ ಸಂಬಳ ನೀಡುವ ಹೊಸ ಉದ್ಯೋಗ ಸಿಕ್ಕಿದೆ!
ಏನಿದು ರೋಚಕ ಸಂಗತಿ ?
ರೆಡ್ಡಿಟ್ ಸಾಮಾಜಿಕ ಜಾಲತಾಣದ ‘r/IndiaCareers’ ವೇದಿಕೆಯಲ್ಲಿ ಉದ್ಯೋಗಿಯೊಬ್ಬರು ಹಂಚಿಕೊಂಡಿರುವ ಈ ಯಥಾರ್ಥ ಗಾಥೆ ಈಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ. ಕಳೆದ 4.5 ವರ್ಷಗಳಿಂದ ಒಂದೇ ಕಂಪನಿಯಲ್ಲಿ ನಿಷ್ಠೆಯಿಂದ ದುಡಿಯುತ್ತಿದ್ದ ಈ ಯುವಕನಿಗೆ ತಿಂಗಳಿಗೆ 70,000 ರೂಪಾಯಿ ಸಂಬಳವಿತ್ತು. ಆದರೆ ಇತ್ತೀಚೆಗೆ ಕಂಪನಿಯು ಪುನರ್ರಚನೆ ನೆಪದಲ್ಲಿ ಆತನನ್ನು ದಿಢೀರ್ ಕೆಲಸದಿಂದ ತೆಗೆದುಹಾಕಿದೆ.
ಕೆಲಸ ಹೋದ ಆಘಾತದಲ್ಲಿದ್ದ ಯುವಕ, ತನಗೆ ಸಿಗಬೇಕಾದ ಪರಿಹಾರದವಿಚಾರವಾಗಿ ಹೆಚ್‌ಆರ್ ಜೊತೆ ವಾಗ್ವಾದ ನಡೆಸಿದ್ದ ಆ ದಿನ ಆತನ ಪಾಲಿಗೆ ಅತ್ಯಂತ ಕರಾಳ ದಿನವಾಗಿತ್ತು. ಆದರೆ, ವಿಧಿಯ ಆಟವೇ ಬೇರೆ ಇತ್ತು.
ಅದೇ ದಿನ ಒಲಿದು ಬಂತು ಬಂಪರ್ ಆಫರ್ !
ಕೆಲಸ ಕಳೆದುಕೊಂಡು ಕಣ್ಣೀರಿಡುತ್ತಿದ್ದ ಯುವಕನಿಗೆ ಅದೇ ದಿನ ಸಂಜೆಯೊಳಗೆ ಮತ್ತೊಂದು ಕಂಪನಿಯಿಂದ ಉದ್ಯೋಗದ ಆಫರ್ ಬಂದಿದೆ. ಭಾರತದಿಂದ ಹೊರಗೆ ಕಾರ್ಯಾಚರಣೆ ನಡೆಸುವ ವಿದೇಶಿ ಕಂಪನಿಯೊಂದು ಈತನನ್ನು ನೇಮಕ ಮಾಡಿಕೊಂಡಿದೆ. ವಿಶೇಷವೆಂದರೆ, ಇದು ಸಂಪೂರ್ಣವಾಗಿ ಮನೆಯಿಂದಲೇ ಕೆಲಸ ಮಾಡುವ (Work From Home) ಅವಕಾಶವಾಗಿದೆ.
ಹೊಸ ಉದ್ಯೋಗದಲ್ಲಿ ಈತ ವಿದೇಶಿ ಗ್ರಾಹಕರಿಗೆ ಕಂಪನಿಯ ಉತ್ಪನ್ನಗಳ ಬಳಕೆಯ ತರಬೇತಿ ಮತ್ತು ತಾಂತ್ರಿಕ ದೋಷಗಳ ನಿವಾರಣೆ ಮಾಡುವ ಜವಾಬ್ದಾರಿ ಹೊರಬೇಕಿದೆ.
ಡಬಲ್ ಸಂಬಳ, ಕೈತುಂಬಾ ಡಾಲರ್ಸ್ !
ಹೊಸ ಕಂಪನಿಯು ಈತನಿಗೆ ನೀಡುತ್ತಿರುವ ಸಂಬಳ ಕೇಳಿದರೆ ಯಾರಾದರೂ ಮೂಗಿನ ಮೇಲೆ ಬೆರಳಿಡಬೇಕು. ಹಳೆಯ ಕಂಪನಿಯಲ್ಲಿ 70 ಸಾವಿರ ರೂಪಾಯಿ ಪಡೆಯುತ್ತಿದ್ದ ಈತನಿಗೆ, ಹೊಸ ಸಂಸ್ಥೆಯು ತಿಂಗಳಿಗೆ ಬರೋಬ್ಬರಿ 1.58 ಲಕ್ಷ ರೂಪಾಯಿ ನೀಡಲು ಒಪ್ಪಿಕೊಂಡಿದೆ. ಅಂದರೆ ಹಳೆಯ ಸಂಬಳಕ್ಕಿಂತ ಶೇಕಡಾ 125 ರಷ್ಟು ಹೆಚ್ಚು! ಎಲ್ಲದಕ್ಕಿಂತ ಮುಖ್ಯವಾಗಿ ಈ ಸಂಬಳ ಭಾರತೀಯ ರೂಪಾಯಿಗಳಲ್ಲಲ್ಲ, ಬದಲಿಗೆ ಅಮೆರಿಕನ್ ಡಾಲರ್ (USD) ರೂಪದಲ್ಲಿ ಆತನ ಕೈಸೇರಲಿದೆ.
“ನನಗೆ ಸಿಕ್ಕಿರುವ ಸಂಬಳದ ಹೈಕ್ ನೋಡಿ ನನಗೇ ಆಶ್ಚರ್ಯವಾಗಿದೆ. 1.58 ಲಕ್ಷ ರೂ. ಸಂಬಳ, ಅದೂ ಡಾಲರ್ ರೂಪದಲ್ಲಿ ಸಿಗುತ್ತಿರುವುದು ಇನ್ನೂ ಕನಸಿನಂತೆ ಭಾಸವಾಗುತ್ತಿದೆ. ಇಷ್ಟು ದಿನ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದರಿಂದ ನನ್ನ ಯೋಗ್ಯತೆಯೇ ಇಷ್ಟೇ ಎಂದು ನಂಬುವಂತಾಗಿತ್ತು. ಆದರೆ ಒಂದೇ ದಿನದಲ್ಲಿ ನನ್ನ ಮೌಲ್ಯ ಬದಲಾಗಿದೆ,” ಎಂದು ಆ ಯುವಕ ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ.
ಕಾರ್ಪೊರೇಟ್ ಜಗತ್ತಿನಲ್ಲಿ ಒಂದೇ ಕಂಪನಿಯಲ್ಲಿ ದೀರ್ಘಕಾಲ ಉಳಿಯುವ ಉದ್ಯೋಗಿಗಳಿಗೆ ಸೂಕ್ತ ಮೌಲ್ಯ ಸಿಗುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎನ್ನುತ್ತಿದ್ದಾರೆ ನೆಟ್ಟಿಗರು. ಸದ್ಯ ಈ ಯುವಕನ ಅದೃಷ್ಟದ ಕಥೆ ಸಾವಿರಾರು ನಿರುದ್ಯೋಗಿಗಳಿಗೆ ಮತ್ತು ಉದ್ಯೋಗ ಕಳೆದುಕೊಂಡವರಿಗೆ ಹೊಸ ಭರವಸೆ ಮೂಡಿಸಿದೆ.