ಬೆಂಗಳೂರು: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಸುಪ್ರಸಿದ್ಧ ಐತಿಹಾಸಿಕ ಮುತ್ತತ್ತಿಯಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಜಲಸಂಪನ್ಮೂಲ ಇಲಾಖೆ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ.
ಕಳೆದ ವಾರ ಮುತ್ತತ್ತಿಯಲ್ಲಿ ಈಜಲು ಹೋಗಿ ಒಂದೇ ಕುಟುಂಬದ ಐವರು ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಾಮಲಿಂಗ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಭಕ್ತಾದಿಗಳು ಮತ್ತು ಪ್ರವಾಸಿಗರ ರಕ್ಷಣೆಗಾಗಿ ಹಲವು ದಿಟ್ಟ ತೀರ್ಮಾನಗಳನ್ನು
ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ನಂತರ ನಡೆದ ಮೊದಲ ಸಭೆಯಲ್ಲಿ ಸಚಿವ ರಾಮಲಿಂಗ ರೆಡ್ಡಿಯವರು ಮುತ್ತತ್ತಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನೀರಿನಲ್ಲಿ ಮುಳುಗಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅವರು ಪ್ರವಾಸಿಗರು ಮತ್ತು ಭಕ್ತಾದಿಗಳ ಸುರಕ್ಷತೆಗಾಗಿ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಮುತ್ತತ್ತಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಾಗೂ ಪ್ರವಾಸಿಗರು, ನದಿಯ ಆಳದ ಅರಿವಿಲ್ಲದೆ ಕಾವೇರಿ ನದಿಯಲ್ಲಿ ಸ್ನಾನಕ್ಕೆ ಇಳಿದು ಪ್ರತಿ ವರ್ಷ ಸರಾಸರಿ 10-12 ಮಂದಿ ಸಾವನ್ನಪ್ಪುತ್ತಿದ್ದಾರೆ.ಇತ್ತೀಚೆಗಷ್ಟೇ 5 ಮಂದಿ ಮೃತಪಟ್ಟಿರುವುದು ಕಳವಳಕಾರಿ ಸಂಗತಿಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಈ ಕೆಳಗಿನ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ:
ಸುರಕ್ಷಿತ ಸ್ನಾನ ಘಟ್ಟಗಳ ನಿರ್ಮಾಣ:
ಋಷಿಕೇಶ ಮತ್ತು ಹರಿದ್ವಾರದ ಮಾದರಿಯಲ್ಲಿ, ಮುತ್ತತ್ತಿ ಕಾವೇರಿ ನದಿಯಲ್ಲಿ ಭಕ್ತಾದಿಗಳು ಮತ್ತು ಪ್ರವಾಸಿಗರು ಸುರಕ್ಷಿತವಾಗಿ ಸ್ನಾನ ಮಾಡಲು ಪ್ರತ್ಯೇಕ ಕಾಲುವೆ (Canal) ಮತ್ತು ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.
ಕಾವೇರಿ ನೀರಾವರಿ ನಿಗಮವು (CNNL) ಒಂದು ವಾರದೊಳಗೆ ಈ ಕುರಿತಾದ ಸಮಗ್ರ ವರದಿಯನ್ನು (DPR) ಸಿದ್ಧಪಡಿಸಿ, ಅನುಮೋದನೆ ಪಡೆಯಬೇಕೆಂದು ಸೂಚಿಸಲಾಗಿದೆ.
ಇದಕ್ಕಾಗಿ ಭಾರತೀಯ ವನ್ಯಜೀವಿ ಮಂಡಳಿಯಿಂದ ಅಗತ್ಯ ನಿರಾಕ್ಷೇಪಣಾ ಪತ್ರ (NOC) ಪಡೆಯಲು ನಿರ್ದೇಶನ ನೀಡಲಾಗಿದೆ. ನಂತರ ಕಾಮಗಾರಿ ಆರಂಭವಾಗಲಿದೆ.
ಸಿಸಿಟಿವಿ ಹಾಗೂ ಗರುಡ ಕ್ಯಾಮೆರಾ
ದೇವಸ್ಥಾನದ ಆವರಣ ಮತ್ತು ಜಲಾನಯನ ಪ್ರದೇಶದ ಸುತ್ತಮುತ್ತ ಸಿಸಿಟಿವಿ ಅಳವಡಿಸಲಾಗುವುದು. ಹೆಚ್ಚುವರಿಯಾಗಿ ಅರಣ್ಯ ಇಲಾಖೆಯಿಂದ ‘ಗರುಡ’ (ಮುನ್ನೆಚ್ಚರಿಕಾ ವ್ಯವಸ್ಥೆ) ಕ್ಯಾಮೆರಾಗಳನ್ನು ಅಳವಡಿಸಿ, ಈ ಎಲ್ಲಾ ಕ್ಯಾಮೆರಾಗಳನ್ನು ಪೊಲೀಸ್ ಇಲಾಖೆಯ ನಿಯಂತ್ರಣ ಕೊಠಡಿಗೆ ಸಂಪರ್ಕ ಕಲ್ಪಿಸಿ ನಿರಂತರ ನಿಗಾ ವಹಿಸಲು ಸೂಚಿಸಲಾಗಿದೆ.
ದೇವಸ್ಥಾನ ಹಾಗೂ ಜಲಾನಯನ ಪ್ರದೇಶದ ಸುತ್ತಮುತ್ತ 20 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈ ಎಲ್ಲವನ್ನೂ ಪೊಲೀಸ್ ಇಲಾಖೆಯ ನಿಯಂತ್ರಣ ಕೊಠಡಿಗೆ ಸಂಪರ್ಕ ಕಲ್ಪಿಸಿ ನಿರಂತರ ನಿಗಾ ವಹಿಸಲಾಗುವುದು.
ಸಿಬ್ಬಂದಿ ನೇಮಕ
ಸಾರ್ವಜನಿಕರ ಸುರಕ್ಷತೆ ಮತ್ತು ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆಯಿಂದ ನಾಲ್ವರು ಮಾರ್ಷಲ್‌ಗಳು ಮತ್ತು ಕಾವೇರಿ ನೀರಾವರಿ ನಿಗಮದಿಂದ ನಾಲ್ವರು ಹೋಮ್ ಗಾರ್ಡ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಯೋಜಿಸಲಾಗುವುದು.
ಪೊಲೀಸ್ ಬಂದೋಬಸ್ತ್:
ಹಬ್ಬ-ಹರಿದಿನಗಳು ಹಾಗೂ ಶನಿವಾರ, ಭಾನುವಾರದಂತಹ ಪ್ರವಾಸಿಗರ ದಟ್ಟಣೆ ಹೆಚ್ಚಿರುವ ದಿನಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಹಾಗೂ ಸಬ್-ಇನ್‌ಸ್ಪೆಕ್ಟರ್‌ಗಳನ್ನು ನಿಯೋಜಿಸಿ ಭದ್ರತೆಯನ್ನು ಬಿಗಿಗೊಳಿಸಲು ನಿರ್ಧರಿಸಲಾಗಿದೆ.
ಶೌಚಾಲಯ ಹಾಗೂ ಸಾರ್ವಜನಿಕ ಘೋಷಣಾ ವ್ಯವಸ್ಥೆ:
ಪ್ರವಾಸಿಗರ ಅನುಕೂಲಕ್ಕಾಗಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುವುದು ಮತ್ತು ತುರ್ತು ಸಂದರ್ಭದಲ್ಲಿ ಸೂಚನೆ ನೀಡಲು ಸಾರ್ವಜನಿಕ ಘೋಷಣಾ ವ್ಯವಸ್ಥೆಯನ್ನು (Public Announcement System) ಅಳವಡಿಸಲು ಸೂಚಿಸಲಾಗಿದೆ.
ಪ್ಲಾಸ್ಟಿಕ್ ನಿಷೇಧ:
ಜಲಾನಯನ ಪ್ರದೇಶದಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟಲು, ಸಣ್ಣ ನೀರಿನ ಬಾಟಲಿಗಳ ಬಳಕೆಯನ್ನು ನಿಷೇಧಿಸಲಾಗಿದೆ. ಪರ್ಯಾಯವಾಗಿ 2 ಲೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ನೀರಿನ ಬಾಟಲಿಗಳನ್ನು ಮಾತ್ರ ಬಳಸಲು ಪ್ರೋತ್ಸಾಹಿಸುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗುವುದು.
ಮೂಲಸೌಕರ್ಯ ಮತ್ತು ಪ್ರಚಾರ:
ಪ್ರವಾಸಿಗರಿಗೆ ಅನುಕೂಲವಾಗುವಂತೆ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುವುದು ಮತ್ತು ಸಾರ್ವಜನಿಕ ಘೋಷಣಾ ವ್ಯವಸ್ಥೆಯ (Public Announcement System) ಮೂಲಕ ನಿರಂತರ ಮುನ್ನೆಚ್ಚರಿಕೆಗಳನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಕ್ರಮಗಳ ಮೂಲಕ ಮುಂದಿನ ದಿನಗಳಲ್ಲಿ ಕಾವೇರಿ ನದಿಯಲ್ಲಿ ಸಂಭವಿಸುವ ಅವಘಡಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಮತ್ತು ಪ್ರವಾಸಿಗರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಮಂಡ್ಯ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.