ಬೆಂಗಳೂರು: ರಾಜ್ಯದಲ್ಲಿ ಐಎಎಸ್ (IAS) ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದೆ ಜೂನ್ 30ರಂದು ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಸ್ಥಳ ನಿಯೋಜನೆ ನಿರೀಕ್ಷೆಯಲ್ಲಿದ್ದ ನಾಲ್ವರು ಹಿರಿಯ ಐಎಎಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸ ಹುದ್ದೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಅಧೀನ ಕಾರ್ಯದರ್ಶಿ ಟಿ. ಮಹಾಂತೇಶ್ ಅವರು ರಾಜ್ಯಪಾಲರ ಹೆಸರಿನಲ್ಲಿ ಈ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಯಾರಿಗೆ ಯಾವ ಹುದ್ದೆ? ಲಿಸ್ಟ್ ಇಲ್ಲಿದೆ:
1.ಅಭಿರಾಮ್ ಜಿ. ಶಂಕರ್ (2011ರ ಬ್ಯಾಚ್):
ಹೊಸ ಹುದ್ದೆ: ಕರ್ನಾಟಕ ಮೈನಿಂಗ್ ಎನ್ವಿರಾನ್‌ಮೆಂಟ್ ರೆಸ್ಟೋರೇಶನ್ ಕಾರ್ಪೊರೇಷನ್ (KMERC) ವ್ಯವಸ್ಥಾಪಕ ನಿರ್ದೇಶಕರು (MD).
ವಿವರ: ಜೂನ್ 30ರಂದು ವಯೋನಿವೃತ್ತಿ ಹೊಂದುತ್ತಿರುವ ಐಎಫ್‌ಎಸ್ ಅಧಿಕಾರಿ ಡಾ. ಸಂಜಯ್ ಎಸ್. ಬಿಜ್ಜೂರ್ ಅವರಿಂದ ತೆರವಾಗುತ್ತಿರುವ ಸ್ಥಾನಕ್ಕೆ ಇವರನ್ನು ನಿಯೋಜಿಸಲಾಗಿದೆ.
2.ಡಾ. ಅವಿನಾಶ್ ಮೆನನ್ ರಾಜೇಂದ್ರನ್ (2013ರ ಬ್ಯಾಚ್):
ಹೊಸ ಹುದ್ದೆ: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (IT-BT) ಇಲಾಖೆಯ ನಿರ್ದೇಶಕರು.
ಹೆಚ್ಚುವರಿ ಜವಾಬ್ದಾರಿ: ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ (KEONICS) ವ್ಯವಸ್ಥಾಪಕ ನಿರ್ದೇಶಕ (MD) ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ಇವರಿಗೆ ವಹಿಸಲಾಗಿದೆ.
3.ಯೋಗೀಶ್ ಎ.ಎಂ. (2013ರ ಬ್ಯಾಚ್):
ಹೊಸ ಹುದ್ದೆ: ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕರು.
ವಿವರ: ಈ ನೇಮಕಾತಿಯ ಮೂಲಕ ಈವರೆಗೆ ಹೆಚ್ಚುವರಿ ಹೊಣೆಗಾರಿಕೆ ಹೊಂದಿದ್ದ ಐಎಎಸ್ ಅಧಿಕಾರಿ ಪ್ರಸನ್ನ ಹೆಚ್. ಅವರನ್ನು ಆ ಜವಾಬ್ದಾರಿಯಿಂದ ಬಿಡುಗಡೆಗೊಳಿಸಲಾಗಿದೆ.
4.ದಿವ್ಯಾ ಪ್ರಭು ಜಿ.ಆರ್.ಜೆ. (2014ರ ಬ್ಯಾಚ್):
ಹೊಸ ಹುದ್ದೆ: ಗ್ರಾಮೀಣಾಭಿವೃದ್ಧಿ ಆಯುಕ್ತರು (Commissioner for Rural Development).
ವಿವರ: ಈವರೆಗೆ ಈ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿದ್ದ ಡಾ. ಅರುಂಧತಿ ಚಂದ್ರಶೇಖರ್ ಅವರನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ.
ನಿಯಮ 12ರ ಅಡಿ ಹೊಸ ಘೋಷಣೆ:
ವರ್ಗಾವಣೆಯ ಜೊತೆಗೆ, ಪುರಸಭೆ ಆಡಳಿತ ನಿರ್ದೇಶಕರ ಕ್ಯಾಡರ್ ಹುದ್ದೆಗೆ ಸಮಾನವಾದ ಸ್ಥಾನಮಾನ ಮತ್ತು ಜವಾಬ್ದಾರಿಗಳನ್ನು ಹೊಂದಿರುವ ಕೆಲವು ಪ್ರಮುಖ ಹುದ್ದೆಗಳನ್ನು ಐಎಎಸ್ (ವೇತನ) ನಿಯಮಗಳು–2016ರ ನಿಯಮ 12ರ ಅಡಿಯಲ್ಲಿ ‘ಸಮಾನ ಹುದ್ದೆಗಳು’ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.