ಬೆಳಗಾವಿ: ಎಸ್‌ಐಆರ್ ಕುರಿತು ದೇಶಾದ್ಯಂತ ವಿವಿಧ ಚರ್ಚೆಗಳು ನಡೆದಿದ್ದು, ಅದರ ಸಾಧಕ–ಬಾಧಕಗಳ ಕುರಿತಾಗಿ ಚರ್ಚಿಸಲಾಗಿದೆ. ಇತರೆ ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆಗಳ ಸಂದರ್ಭದಲ್ಲಿ ಉಂಟಾದ ಸವಾಲುಗಳ ಅನುಭವವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದಲ್ಲಿ ಮತದಾರರ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಎಸ್‌ಐಆರ್ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯಬೇಕು. ಬಿಎಲ್‌ಒಗಳು ಮತ್ತು ಸಂಬಂಧಿತ ಅಧಿಕಾರಿಗಳು ಪರಸ್ಪರ ಸಂಪರ್ಕ ಇಟ್ಟುಕೊಂಡು, ಅರ್ಹ ಮತದಾರರ ಹೆಸರು ಅನಗತ್ಯವಾಗಿ ಕೈಬಿಡದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ವಸತಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳಿಗೆ ಅಧಿಕಾರ ನೀಡಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡು 15 ವರ್ಷಗಳ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ಕೇಂದ್ರದಿಂದ ಅನುದಾನ ವಿಳಂಬ, ಯೋಜನೆಗಳ ಅನುಷ್ಠಾನದಲ್ಲಿ ತೊಂದರೆ, ಬಡಜನರಿಗೆ ಅಗತ್ಯ ಸೌಲಭ್ಯಗಳನ್ನು ತಲುಪಿಸುವಲ್ಲಿ ಹಲವು ಸಮಸ್ಯೆಗಳನ್ನು ಅನುಭವಿಸಿದ್ದೇವೆ. ಜೆಜೆಎಂ ಯೋಜನೆ ಹಾಗೂ ನರೇಗಾ ಕಾರ್ಯಕ್ರಮಗಳಿಗೂ ಅಗತ್ಯ ಹಣಕಾಸು ನೆರವು ದೊರೆಯದಿರುವ ಪರಿಸ್ಥಿತಿಗಳನ್ನು ಕಂಡಿದ್ದೇವೆ. ಕೇಂದ್ರ ಸರ್ಕಾರದಿಂದ ಸಿಗದ ಬೆಂಬಲ ಮತ್ತು ಸಹಕಾರದ ಕೊರತೆಯು ಅಭಿವೃದ್ಧಿ ಕಾರ್ಯಗಳ ಮೇಲೆ ಬೀರುವ ಪರಿಣಾಮದ ಬಗೆಗಿನ ಅನುಭವ ನಮಗಿದೆ ಎಂದು ಕೇಂದ್ರದ ಅಸಹಕಾರದ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಬಡವರ ಕಲ್ಯಾಣವನ್ನೇ ಪ್ರಮುಖ ಆದ್ಯತೆಯನ್ನಾಗಿರಿಸಿಕೊಂಡಿದೆ. ನಾವು ಜಾರಿಗೆ ತಂದಿರುವ ಜನಪರ ಯೋಜನೆಗಳು ಹಾಗೂ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯಬೇಕಾದರೆ 2028ರಲ್ಲಿಯೂ ಮತ್ತೊಮ್ಮೆ ಜನರ ಆಶೀರ್ವಾದ ನಮಗೆ ಬೇಕು. ಇದೇ ಕಾರಣಕ್ಕಾಗಿ ಎಸ್‌ಐಆರ್ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ಕಾರಣಕ್ಕೂ ಮತದಾರರ ಹಕ್ಕಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಎಲ್ಲಿ ತಪ್ಪುಗಳು ಕಂಡುಬಂದರೂ ಅವುಗಳ ಮೇಲ್ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೆಪಿಸಿಸಿಗೆ ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ಬಳಿಕ ಸ್ವಾಭಾವಿಕವಾಗಿ ಪದಾಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಹುದ್ದೆಗಳಲ್ಲಿ ಬದಲಾವಣೆಗಳು ನಡೆಯುತ್ತವೆ. ಆಯಾ ಜಿಲ್ಲೆಗಳಲ್ಲಿ ಪಕ್ಷಕ್ಕಾಗಿ ಸಮರ್ಪಿತವಾಗಿ ದುಡಿದ, ಅರ್ಹತೆ ಹೊಂದಿರುವ ಕಾರ್ಯಕರ್ತರು ಹಾಗೂ ಅಧಿಕಾರಿಗಳನ್ನು ಗುರುತಿಸಿ ಸೂಕ್ತ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಸಚಿವರು, ಶಾಸಕರು ಹಾಗೂ ಜಿಲ್ಲಾಧ್ಯಕ್ಷರೊಂದಿಗೆ ಸಮನ್ವಯ ಸಭೆ ನಡೆಸಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಸೂಕ್ತ ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಿದರೆ, ಅದನ್ನು ಪರಿಶೀಲಿಸಿ ಅಧ್ಯಕ್ಷರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಕಚೇರಿ ನಮಗೆ ದೇವಾಲಯವಿದ್ದಂತೆ , ಪಕ್ಷ ತಾಯಿಯಿದ್ದಂತೆ. ಆದ್ದರಿಂದ ಅದರ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ಇರಬಾರದು. ಅಧ್ಯಕ್ಷನಾಗಿದ್ದ ಅವಧಿಯಲ್ಲಿ ವಿವಿಧ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಸುಮಾರು 13 ಕಟ್ಟಡಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು. ಭಾರತ್ ಜೋಡೋ ಕಟ್ಟಡವನ್ನು ಸುಮಾರು ₹20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅದರ ಉದ್ಘಾಟನೆಗೂ ಮುನ್ನ ಅಧಿಕಾರದಿಂದ ಹೊರಬಂದಿದ್ದೆ ಎಂದು ಆ ಸಂದರ್ಭವನ್ನು ನೆನಪಿಸಿಕೊಂಡರು.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿ ನಿರ್ಮಾಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಅವರ ಶ್ರಮವೂ ಮಹತ್ವದ್ದಾಗಿದೆ. ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಹಲವು ಚರ್ಚೆಗಳು ನಡೆದಿದ್ದವು. ಶ್ರೀ ಡಿ.ಕೆ. ಶಿವಕುಮಾರ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಬೆಳಗಾವಿ ಕಾಂಗ್ರೆಸ್ ಕಚೇರಿಗೆ ಸೂಕ್ತ ಜಾಗ ಪಡೆಯುವ ಅಗತ್ಯವನ್ನು ಒತ್ತಾಯಿಸಿದ್ದರು. ಪ್ರಮುಖ ಸ್ಥಳದಲ್ಲಿದ್ದ ಆ ಜಾಗವನ್ನು ಖರೀದಿಸಲು ₹25 ಲಕ್ಷ ಅನುದಾನ ನೀಡಿ ಅಡಿಗಲ್ಲು ಹಾಕಲಾಗಿತ್ತು ಎಂದು ವಿವರಿಸಿದರು.
ನಮ್ಮ ಸರ್ಕಾರ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಸಚಿವರು ಜಿಲ್ಲೆ ಅಥವಾ ತಾಲ್ಲೂಕು ಮಟ್ಟಕ್ಕೆ ಭೇಟಿ ನೀಡಿದಾಗ ಸ್ಥಳೀಯ ಪಕ್ಷದ ಕಚೇರಿಗೆ ಭೇಟಿ ನೀಡಲು ಸೂಚಿಸಿದ್ದೆ. ಈ ಮೂಲಕ ಆಯಾ ಭಾಗದ ಕಾರ್ಯಕರ್ತರೊಂದಿಗೆ ಸಂಪರ್ಕ ಬೆಳೆಯಬೇಕು ಎಂಬ ಉದ್ದೇಶವಿತ್ತು. ಕೆಲವರು ಅದನ್ನು ಅನುಸರಿಸಿದರೆ, ಕೆಲವರು ಅನುಸರಿಸಲು ಸಾಧ್ಯವಾಗಿರಲಿಲ್ಲ ಎಂದರು.
ನಾನು ಚಿಕ್ಕ ವಯಸ್ಸಿನಲ್ಲೇ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯಲು ಶುರು ಮಾಡಿದವನು. ಆರಂಭದಲ್ಲಿ 7 ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೆ. ಆ ಬಳಿಕ ಧರಂ ಸಿಂಗ್ ಮತ್ತು ಎಸ್.ಎಂ.ಕೃಷ್ಣ ಅವರು ನನ್ನನ್ನು ಉಪಾಧ್ಯಕ್ಷರನ್ನಾಗಿ ಮಾಡಿದರು. ನಂತರದಲ್ಲಿ ಸೋನಿಯಾ ಗಾಂಧಿ ಅವರು ಕಾರ್ಯಕಾರಿ ಸಮಿತಿಗೆ ಸದಸ್ಯನಾಗಿ ಮಾಡಿದರು. ಅದಾಗಿ ಪ್ರಚಾರ ಸಮಿತಿಯ ಅಧ್ಯಕ್ಷನಾದೆ. ಆದ್ದರಿಂದ ಪಕ್ಷಕ್ಕಾಗಿ ದುಡಿಯುವ ಪ್ರತಿ ಕಾರ್ಯಕರ್ತನಿಗೂ ಅವಕಾಶ ಸಿಕ್ಕೇ ಸಿಗುತ್ತದೆ. ನಾವೆಲ್ಲರೂ ಜೊತೆಯಾಗಿ ಪಕ್ಷಕ್ಕಾಗಿ ದುಡಿಯೋಣ. ದೀನ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಈ ಸಮುದಾಯಗಳ ಏಳಿಗಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
ಪಕ್ಷದ ಕಾರ್ಯಕರ್ತರಿಗೆ ಜವಾಬ್ದಾರಿ ನೀಡುವ ಕುರಿತು ಒಂದು ಸಮಿತಿಯನ್ನು ರಚಿಸಲಾಗಿತ್ತು. ಅದಕ್ಕೆ ನಾನೇ ಅಧ್ಯಕ್ಷನಾಗಿದ್ದೆ. ಪ್ರಕ್ರಿಯೆಯಲ್ಲಿ ರಾಜ್ಯಾದ್ಯಂತ ಸುಮಾರು 800 ಕಾರ್ಯಕರ್ತರನ್ನು ಗುರುತಿಸಿ, ಯಾವ ಸಮಿತಿಗೆ ಅವರನ್ನು ಆಯ್ಕೆ ಮಾಡಬೇಕು ಎಂಬ ವರದಿಯನ್ನು ಸಿದ್ಧಪಡಿಸಿ ಅಂದಿನ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೆ. ಆದರೆ ಕಾರಣಾಂತರಗಳಿಂದ ಅದು ಕಾರ್ಯರೂಪಕ್ಕೆ ಬರಲಿಲ್ಲ. ಈಗ ಹೊಸದಾಗಿ ಮುಖ್ಯಮಂತ್ರಿಗಳು, ಕೆಪಿಎಸ್‌ಸಿ ಅಧ್ಯಕ್ಷರು ಬಂದಿದ್ದಾರೆ. ಕಾರ್ಯಕರ್ತರಿಗೆ ಅಧಿಕಾರ ನೀಡುವ ಬಗ್ಗೆ ಈಗಾಗಲೇ ಅನೇಕ ಚರ್ಚೆಗಳು ಕೂಡ ಆಗಿವೆ. ಆದಷ್ಟು ಶೀಘ್ರವಾಗಿ ಇವರಿಬ್ಬರನ್ನು ಖುದ್ದಾಗಿ ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
ನನಗೆ ಪಕ್ಷದ ಬಗ್ಗೆ ಮೊದಲಿನಿಂದಲೂ ಅಪಾರ ಗೌರವವಿದೆ. ಸ್ವಾತಂತ್ರ್ಯ ಹೋರಾಟದ ಪರಂಪರೆ ಇರುವ ನಮ್ಮ ಪಕ್ಷ ಜನರಿಗೆ ಆತ್ಮವಿಶ್ವಾಸ ಮತ್ತು ಧೈರ್ಯ ತುಂಬಿದೆ. ಅದನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ನಮ್ಮಿಂದ ಆಗಬೇಕು ಎಂದ ಅವರು ಈ ಸಂದರ್ಭದಲ್ಲಿ ಸುಮಾರು 11 ವರ್ಷಗಳಿಂದ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷಕ್ಕಾಗಿ ದುಡಿಯುತ್ತಿರುವ ಶ್ರೀ ವಿನಯ್ ಅವರಿಗೆ ಶುಭಹಾರೈಸಿದರು.
ಜೊತೆಗೆ ಕಂದಾಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿರುವ ಬಗ್ಗೆ ಮಾತನಾಡಿ, ಈ ಬಾರಿ ಮಳೆಯ ಪ್ರಮಾಣ ಕಡಿಮೆ ಇದೆ. ದೇಶದಲ್ಲೇ ಸುಮಾರು 75% ಭಾಗದಲ್ಲಿ ಬರ ಸೃಷ್ಟಿಯಾಗಿದೆ. ಇನ್ನು ಮಳೆ ಬರುವ ಮುನ್ಸೂಚನೆಯೂ ಇಲ್ಲ. ನೀರಿನ ಕೊರತೆ ಎದುರಿಸಬಹುದಾದ 7 ಜಿಲ್ಲೆಗಳ ಜಿಲ್ಲಾಧಿಕಾರಗಳ ಜೊತೆಗೆ ಸಭೆ ನಡೆಸಿ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹಾಗೂ ಜನರಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ತಿಳಿಸಿದರು.