ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿ ಇಂದಿಗೆ ಒಂದು ತಿಂಗಳು ಪೂರ್ಣಗೊಂಡಿದೆ. ತಮ್ಮ ವಿಶಿಷ್ಟ ಶೈಲಿಯ ರಾಜಕಾರಣ ಮತ್ತು ಆಡಳಿತದ ಮೂಲಕ ರಾಜ್ಯದ ರಾಜಕೀಯ ವಲಯದಲ್ಲಿ ಗಮನ ಸೆಳೆಯುತ್ತಿರುವ ಅವರು, ಅಲ್ಪಾವಧಿಯಲ್ಲೇ ರಾಜ್ಯದ ಅಭಿವೃದ್ಧಿ ಹಾಗೂ ಆಡಳಿತ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.
ಅಧಿಕಾರ ವಹಿಸಿಕೊಂಡ ತಕ್ಷಣವೇ ಆಡಳಿತ ಯಂತ್ರವನ್ನು ಚುರುಕುಗೊಳಿಸುವಲ್ಲಿ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಕಳೆದ 30 ದಿನಗಳಲ್ಲಿ ಅವರು ಸಚಿವಾಲಯದ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ಒತ್ತು ನೀಡಿದ್ದಾರೆ. ಕಡತಗಳ ವಿಲೇವಾರಿಯಲ್ಲಿ ವಿಳಂಬವನ್ನು ಸಹಿಸುವುದಿಲ್ಲ ಎಂಬ ಖಡಕ್ ಸಂದೇಶವನ್ನು ಅವರು ಅಧಿಕಾರಿಗಳಿಗೆ ರವಾನಿಸಿದ್ದಾರೆ.
ಅವರ ಮೊದಲ 30 ದಿನಗಳ ಅವಧಿಯು ಆಡಳಿತದಲ್ಲಿ ಚುರುಕುತನ, ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಗಮನ ಸೆಳೆದಿದೆ. ಅವರು ಕೈಗೊಂಡ ನಿರ್ಧಾರಗಳು ರಾಜ್ಯದ ಆಡಳಿತ ಯಂತ್ರಕ್ಕೆ ಹೊಸ ಚೈತನ್ಯ ತುಂಬುವ ಪ್ರಯತ್ನವಾಗಿವೆ.
ಆಡಳಿತಾತ್ಮಕ ಸುಧಾರಣೆಗಳು ಮತ್ತು ದಕ್ಷತೆ
ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸಿಬ್ಬಂದಿಗಳ ಹಾಜರಾತಿಯಲ್ಲಿ ತಂತ್ರಜ್ಞಾನದ ಅಳವಡಿಕೆ ಮತ್ತು ಸಾರ್ವಜನಿಕ ಅಹವಾಲುಗಳನ್ನು ಆಲಿಸಲು ‘ಪ್ರಜಾಸೇವೆ’ ಸಚಿವಾಲಯದ ಕಲ್ಪನೆ ಅತ್ಯಂತ ಮಹತ್ವದ್ದು. ಅಧಿಕಾರಿಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಲು ಸೂಚನೆ ನೀಡಿರುವುದು ಮತ್ತು ನಿಷ್ಕ್ರಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವುದು ಆಡಳಿತಕ್ಕೆ ವೇಗ ನೀಡಿದೆ.
ಬೆಂಗಳೂರಿನ ಮೂಲಸೌಕರ್ಯ ಮತ್ತು ನಗರಾಭಿವೃದ್ಧಿ
ರಾಜಧಾನಿ ಬೆಂಗಳೂರಿನ ಸಮಸ್ಯೆಗಳ ನಿವಾರಣೆಗೆ ವಿಶೇಷ ಗಮನ ಹರಿಸಲಾಗಿದೆ. 2,000 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಗುಂಡಿ ಮುಕ್ತ ಯೋಜನೆ, ಕೆಂಪೇಗೌಡ ಬಡಾವಣೆಯಲ್ಲಿ ಎಸ್‍ಎಂ ಕೃಷ್ಣ ರಸ್ತೆ ಉದ್ಘಾಟನೆ ಮತ್ತು ಹೆಬ್ಬಾಳದಲ್ಲಿ ಸಣ್ಣ ಸುರಂಗ ರಸ್ತೆ ನಿರ್ಮಾಣದಂತಹ ಯೋಜನೆಗಳು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ. ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತನೆಗೆ ಅವಕಾಶ ಕಲ್ಪಿಸಿರುವುದು ಸಾವಿರಾರು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ನೆಮ್ಮದಿ ನೀಡಿದೆ.
ಜನಪರ ಯೋಜನೆಗಳು ಮತ್ತು ಗ್ಯಾರಂಟಿ ಸಮಿತಿ
ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಮಾತ್ರ ತಲುಪಬೇಕು ಎಂಬ ಎಚ್ಚರ ವಹಿಸಿ, ಸೋರಿಕೆ ತಡೆಗೆ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿರುವುದು ಯೋಜನೆಯ ಯಶಸ್ಸಿಗೆ ಕಾರಣವಾಗಲಿದೆ. ವಿದ್ಯಾರ್ಥಿಗಳಿಗಾಗಿ ಉಚಿತ ಬಸ್ ಪಾಸ್ ಘೋಷಣೆ ಶಿಕ್ಷಣ ಕ್ಷೇತ್ರದಲ್ಲಿಯೂ ತಮ್ಮ ಬದ್ಧತೆಯನ್ನು ತೋರಿಸಿದೆ.
ಕೃಷಿ, ನೀರಾವರಿ ಮತ್ತು ರೈತರ ಹಿತ
ತುಂಗಭದ್ರಾ ಅಣೆಕಟ್ಟಿನ ಸ್ಪಿಲ್ ಗೇಟ್ ಅಳವಡಿಕೆ ಮತ್ತು ಹೂಳು ತೆಗೆಯುವ ಕುರಿತು ಕೇಂದ್ರದೊಂದಿಗೆ ಸಮನ್ವಯ ಸಾಧಿಸಿರುವುದು ರೈತರ ಹಿತದೃಷ್ಟಿಯಿಂದ ಅತ್ಯಂತ ಸೂಕ್ತ ಕ್ರಮ. ಮೇಕೆದಾಟು ಯೋಜನೆಗೆ ವನ್ಯಜೀವಿ ಮಂಡಳಿಯ ಅನುಮತಿ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದು ದಶಕಗಳ ಬೇಡಿಕೆಗೆ ಮರುಜೀವ ನೀಡಿದಂತಾಗಿದೆ.
ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಭದ್ರತೆ
ರಾಜ್ಯವನ್ನು ‘ನಶೆ ಮುಕ್ತ’ ಮಾಡುವ ಗುರಿಯೊಂದಿಗೆ ಡ್ರಗ್ಸ್ ಜಾಲದ ವಿರುದ್ಧ ಕಠಿಣ ಕ್ರಮ, ರೌಡಿಗಳ ನಿಗ್ರಹಕ್ಕೆ ವಿಶೇಷ ಪಡೆ ಮತ್ತು ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವ ನಿರ್ಧಾರಗಳು ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಸ್ಥಾಪಿಸಲು ಪೂರಕವಾಗಿವೆ.
ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿ
72,000 ಸರ್ಕಾರಿ ಹುದ್ದೆಗಳ ನೇಮಕಾತಿಗೆ 6 ತಿಂಗಳ ಗಡವು ಮತ್ತು ಖಾಸಗಿ ವಲಯದ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆಯ ನಿರ್ಧಾರಗಳು ರಾಜ್ಯದ ಯುವಜನತೆಯ ಉದ್ಯೋಗ ಆಕಾಂಕ್ಷೆಗಳಿಗೆ ಬಲ ನೀಡಿದೆ. ಹೊಸ ಸಿಎಸ್ ಆರ್ ನೀತಿಯ ಚಿಂತನೆಯು ಅಭಿವೃದ್ಧಿಗೆ ಹೆಚ್ಚುವರಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಸಹಕಾರಿಯಾಗಲಿದೆ.
ಕೇಂದ್ರದೊಂದಿಗೆ ಸಮನ್ವಯ
ಪ್ರಧಾನಮಂತ್ರಿ ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ನೀರಾವರಿ, ಮೆಟ್ರೋ ಮತ್ತು ವಿಶೇಷ ಅನುದಾನಗಳ ಕುರಿತು ಚರ್ಚಿಸಿರುವುದು, ಪಕ್ಷಾತೀತವಾಗಿ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದ ಸಹಕಾರ ಪಡೆಯುವ ಅವರ ರಾಜತಾಂತ್ರಿಕ ನಿಲುವನ್ನು ಎತ್ತಿ ತೋರಿಸುತ್ತದೆ. ಡಿ.ಕೆ. ಶಿವಕುಮಾರ್ ಅವರ ಮೊದಲ 30 ದಿನಗಳು ‘ಕ್ರಮಬದ್ಧವಾದ ಆಡಳಿತ ಮತ್ತು ಜನಪರ ಬದ್ಧತೆ’ಯ ಸಂಕೇತವಾಗಿದೆ. ದೆಹಲಿಯಲ್ಲಿ ಐಎಎಸ್ ಅಧಿಕಾರಿಗಳ ಸಭೆ ಕರೆದದ್ದು ಮತ್ತು ಸುಪ್ರೀಂ ಕೋರ್ಟ್‍ನಲ್ಲಿ ವಕೀಲರ ತಂಡವನ್ನು ಬಲಪಡಿಸಿದ್ದು, ಅವರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಸಣ್ಣ ಸುಧಾರಣೆಗಳಿಂದ ಹಿಡಿದು ಬೃಹತ್ ನೀರಾವರಿ ಯೋಜನೆಗಳವರೆಗೆ ಅವರು ಕೈಗೊಂಡಿರುವ ಕ್ರಮಗಳು, ಕರ್ನಾಟಕವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯುವ ಅವರ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತವೆ. ಅಧಿಕಾರಿ ವರ್ಗದ ಮೇಲಿನ ಹಿಡಿತ ಮತ್ತು ಸಾರ್ವಜನಿಕರ ಮೇಲಿನ ಕಾಳಜಿ ಈ ಆಡಳಿತದ ಪ್ರಮುಖ ಆಸ್ತಿಯಾಗಿದೆ.