ನವದೆಹಲಿ: ರಾಜ್ಯದ ಜನತೆಗೆ ಶೀಘ್ರವೇ ಇಂದಿರಾ ಕಿಟ್ ಗಳನ್ನು ವಿತರಿಸಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಜನರಿಗೆ ಇಂದಿರಾ ಕಿಟ್ ವಿತರಿಸುವ ಯೋಜನೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಆದಷ್ಟು ಶೀಘ್ರವೇ ಈ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ,
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ರಾಜ್ಯಕ್ಕೆ ಬರಬೇಕಾದ 1902 ಕೋಟಿ ರೂ. ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ರಾಜ್ಯದಿಂದ ಆಡಿಟ್ ವರದಿ ನೀಡಲಾಗಿದ್ದು, ಬಾಕಿ ಹಣವನ್ನು ಕೇಂದ್ರ ಸರ್ಕಾರ ಬೇಗನೆ ನೀಡಿದಲ್ಲಿ ರೈತರಿಗೆ ತಲುಪಿಸಲು ಅನುಕೂಲವಾಗುತ್ತದೆ ಎಂದಿದ್ದಾರೆ. ಮೊದಲ ಹಂತದಲ್ಲಿ 190 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಉಳಿದಂತೆ ಎಂ.ಎಸ್.ಪಿ. ಅಡಿ ನೀಡುವ ಅನುದಾನ ಬಿಡುಗಡೆಯಾಗಬೇಕಿದೆ ಎಂದು ಹೇಳಿದ್ದಾರೆ.
ಇಂದಿರಾ ಕಿಟ್
ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ(BPL) ಪಡಿತರ ಚೀಟಿದಾರರಿಗೆ ಹೆಚ್ಚುವರಿಯಾಗಿ ನೀಡುತ್ತಿದ್ದ 5 ಕೆ.ಜಿ ಅಕ್ಕಿಯ ಬದಲಾಗಿ ಇಂದಿರಾ ಕಿಟ್(Indira Kit) ಅನ್ನು ವಿತರಿಸಲು ತೀರ್ಮಾನಿಸಿದೆ. ಈ ಕಿಟ್‌ನಲ್ಲಿ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಸೇರಿದಂತೆ ಇತರೆ ಪೌಷ್ಟಿಕಾಂಶದ ಆಹಾರ ಪದಾರ್ಥಗಳು ಇರಲಿವೆ.
ಸರ್ಕಾರ ಇಂದಿರಾ ಕಿಟ್ ಯೋಜನೆಯ ಟೆಂಡರ್ ಪ್ರಕ್ರಿಯೆಗಳನ್ನು ಅಂತಿಮ ಹಂತಕ್ಕೆ ತಂದಿದ್ದು, ಅನುಷ್ಠಾನ ಸಂಬಂಧ ಆಹಾರ ಇಲಾಖೆಯ ಸಿದ್ಧತೆಗಳು ನಡೆಯುತ್ತಿವೆ.