ಭಾರತೀಯ ಸಾಂಪ್ರದಾಯಿಕ ಅಡುಗೆಗಳಲ್ಲಿ ರಾಜಸ್ಥಾನಿ ಶೈಲಿಯ ಖಾದ್ಯಗಳಿಗೆ ವಿಶೇಷ ಸ್ಥಾನವಿದೆ. ಅಲ್ಲಿನ ಮಸಾಲೆ ಮತ್ತು ವಿಶಿಷ್ಟ ರುಚಿ ಯಾರನ್ನಾದರೂ ಸೆಳೆಯುತ್ತದೆ. ದಿನಾಲೂ ತಿನ್ನುವ ಸಾಮಾನ್ಯ ಬೇಳೆ ಸಾರು ತಿಂದು ಬೇಜಾರಾಗಿದ್ದರೆ, ಉತ್ತರ ಭಾರತದ ಜನಪ್ರಿಯ ಮತ್ತು ಆರೋಗ್ಯಕರ ‘ರಾಜಸ್ಥಾನಿ ಲೆಹಸುನಿ ಮೂಂಗ್ ದಾಲ್’ (ಬೆಳ್ಳುಳ್ಳಿ ಹೆಸರುಬೇಳೆ ಸಾರು) ಒಮ್ಮೆ ಪ್ರಯತ್ನಿಸಬಹುದು.
ಇಡೀ ಹಸಿರು ಹೆಸರುಕಾಳನ್ನು ಬಳಸಿ ಮಾಡುವ ಈ ದಾಲ್, ಬೆಳ್ಳುಳ್ಳಿಯ ಘಮ ಮತ್ತು ಮಸಾಲೆಯುಕ್ತ ರುಚಿಯಿಂದ ಕೂಡಿರುತ್ತದೆ. ಬಿಸಿ ಬಿಸಿ ಅನ್ನ, ಜೀರಾ ರೈಸ್ ಅಥವಾ ಚಪಾತಿ ಜೊತೆಗೆ ಸವಿಯಲು ಇದು ಅತ್ಯುತ್ತಮ ಕಾಂಬಿನೇಷನ್. ಒಂದು ವೇಳೆ ನಿಮಗೆ ಇಡೀ ಹೆಸರುಕಾಳು ಬೇಡವೆನಿಸಿದರೆ, ಮಾಮೂಲಿ ಹಳದಿ ಹೆಸರುಬೇಳೆಯನ್ನು ಬಳಸಿ ಕೂಡ ಇದನ್ನು ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
- ಇಡೀ ಹಸಿರು ಹೆಸರುಕಾಳು – 1 ಕಪ್ (6 ರಿಂದ 8 ಗಂಟೆ ನೆನೆಸಿರಬೇಕು)
- ಬೆಳ್ಳುಳ್ಳಿ ಎಸಳುಗಳು – 10-12 (ಸಣ್ಣಗೆ ಹೆಚ್ಚಿದ ಅಥವಾ ಜಜ್ಜಿದ ಪ್ರತ್ಯೇಕ ಎಸಳುಗಳು)
- ಈರುಳ್ಳಿ – 1 (ಸಣ್ಣಗೆ ಹೆಚ್ಚಿದ್ದು)
- ಟೊಮೆಟೊ – 1 (ಸಣ್ಣಗೆ ಹೆಚ್ಚಿದ್ದು)
- ಹಸಿರು ಮೆಣಸಿನಕಾಯಿ – 2
- ಜೀರಿಗೆ – 1 ಚಮಚ
- ಅರಿಶಿನ ಪುಡಿ – ಅರ್ಧ ಚಮಚ
- ಅಚ್ಚ ಖಾರದ ಪುಡಿ – 1 ಚಮಚ
- ಧನಿಯಾ ಪುಡಿ – 1 ಚಮಚ
- ತುಪ್ಪ ಅಥವಾ ಎಣ್ಣೆ – 2 ಚಮಚ
- ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ: ಮೊದಲಿಗೆ ನೆನೆಸಿದ ಹೆಸರುಕಾಳನ್ನು ಚೆನ್ನಾಗಿ ತೊಳೆದು, ಅದಕ್ಕೆ ಅರಿಶಿನ, ಉಪ್ಪು ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ. ಕಾಳು ಸಾಫ್ಟ್ ಆಗಬೇಕು ಆದರೆ ತೀರಾ ಪೇಸ್ಟ್ ಆಗದಂತೆ ನೋಡಿಕೊಳ್ಳಿ.
ನಂತರ ಒಂದು ಪಾತ್ರೆಯಲ್ಲಿ ತುಪ್ಪ ಅಥವಾ ಎಣ್ಣೆ ಕಾಯಿಸಿ ಜೀರಿಗೆ ಹಾಕಿ, ಬಳಿಕ ಹೆಚ್ಚಿದ ಬೆಳ್ಳುಳ್ಳಿ ಸೇರಿಸಿ ಅದು ತಿಳಿ ಚಿನ್ನದ ಬಣ್ಣಕ್ಕೆ ತಿರುಗಿ ಘಮ ಬರುವವರೆಗೆ ಹುರಿಯಿರಿ. ಇದಕ್ಕೆ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಬಾಡಿಸಿ, ನಂತರ ಟೊಮೆಟೊ ಸೇರಿಸಿ ಅದು ಮೆತ್ತಗಾಗುವವರೆಗೆ ಬೇಯಿಸಿ.
ಈ ಮಿಶ್ರಣಕ್ಕೆ ಧನಿಯಾ ಪುಡಿ ಮತ್ತು ಖಾರದ ಪುಡಿ ಸೇರಿಸಿ ಒಂದು ನಿಮಿಷ ಕೈಯಾಡಿಸಿ. ಈಗ ಬೇಯಿಸಿಟ್ಟುಕೊಂಡ ಹೆಸರುಕಾಳನ್ನು ಈ ಮಸಾಲೆಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ, ಮಸಾಲೆ ಮತ್ತು ಬೆಳ್ಳುಳ್ಳಿಯ ರುಚಿ ಕಾಳಿಗೆ ಚೆನ್ನಾಗಿ ಹಿಡಿಯುವಂತೆ 8-10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಿಸಿಬಿಸಿಯಾದ ರಾಜಸ್ಥಾನಿ ಲೆಹಸುನಿ ಮೂಂಗ್ ದಾಲ್ ಸವಿಯಲು ಸಿದ್ಧ. ಇನ್ನು ಹೆಚ್ಚಿನ ರುಚಿ ಬೇಕಿದ್ದಲ್ಲಿ, ಕೊನೆಯಲ್ಲಿ ಮತ್ತೊಮ್ಮೆ ಬೆಳ್ಳುಳ್ಳಿ ಮತ್ತು ತುಪ್ಪದ ಒಗ್ಗರಣೆಯನ್ನು ಇದರ ಮೇಲಿಂದ ನೀಡಬಹುದು.