ಬೆಂಗಳೂರು: ಅಣ್ಣನ ಪ್ರೀತಿ ನಿರಾಕರಿಸಿದ ಯುವತಿಗೆ ತಮ್ಮ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರಿನ ಹೆಚ್ಎಎಲ್ ರಸ್ತೆಯ ಕೋಡಿಹಳ್ಳಿಯಲ್ಲಿ ನಡೆದಿದೆ.
ಜುಲೈ 13 ರಂದು ಚಾಕು ಇರಿತಕ್ಕೆ ಒಳಗಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಮೃತಾ ಮೃತಪಟ್ಟ ಯುವತಿ ಎಂದು ಹೇಳಲಾಗಿದೆ.
ಒಂದೇ ಏರಿಯಾದವರಾಗಿದ್ದ ಅಮೃತಾ ಮತ್ತು ಧನುಷ್ ಓಂ ಶಕ್ತಿ ಮಾಲೆ ಹಾಕುವ ವೇಳೆ ಪರಿಚಿತರಾಗಿದ್ದು, ಪ್ರೀತಿಸುತ್ತಿದ್ದರು. ಧನುಷ್ ಗೆ ಒಂದು ವರ್ಷದ ಮಗು ಇದ್ದು ವಿಚ್ಛೇದನ ಪಡೆದುಕೊಂಡಿದ್ದ. ಆದರೆ ಮದುವೆಯಾಗಿದ್ದ ವಿಚಾರವನ್ನು ಅಮೃತಾ ಅವರಿಂದ ಮುಚ್ಚಿಟ್ಟಿದ್ದ. ಈ ವಿಚಾರ ತಿಳಿದ ಅಮೃತಾ ಧನುಷ್ ನಿಂದ ದೂರವಾಗಿದ್ದರು.
ಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ತಮ್ಮ ಸೂರ್ಯ ಜುಲೈ 13ರಂದು ಅಮೃತಾಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಾಳು ಯುವತಿಯನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.