ತಮ್ಮ ಅಪಾರ ಮೌಲ್ಯದ ಮನೆಯನ್ನು ಮಾರಿ ದುಬಾರಿ ಡುಕಾಟಿ ಬೈಕ್ ಖರೀದಿಸಿದ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಉದ್ಯಮಿಯೊಬ್ಬರ ನಿರ್ಧಾರ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ‘ದುಕಾನ್’ ಆನ್‌ಲೈನ್ ಸಂಸ್ಥೆಯ ಸಹ-ಸಂಸ್ಥಾಪಕ ಸುಭಾಷ್ ಚೌಧರಿ ಅವರು ಮುಂಬೈನಲ್ಲಿದ್ದ ತಮ್ಮ ಮನೆಯನ್ನು ಮಾರಿ, ‘ಡುಕಾಟಿ ಎಕ್ಸ್‌ಡೈವೆಲ್’ ಬೈಕ್ ಖರೀದಿಸಿದ ಕಾರಣವನ್ನು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಹಂಚಿಕೊಂಡಿದ್ದಾರೆ.
೨೦೧೮ ರಲ್ಲಿ ಮುಂಬೈನಲ್ಲಿ ೧.೮ ಕೋಟಿ ರೂಪಾಯಿ ನೀಡಿ ಮನೆ ಖರೀದಿಸಿದ್ದಾಗಿ ತಿಳಿಸಿರುವ ಸುಭಾಷ್, ಉದ್ಯಮದ ನಿಮಿತ್ತ ಬೆಂಗಳೂರಿಗೆ ಬಂದ ಮೇಲೂ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ರೂಪಾಯಿ ಇಎಮ್‌ಐ ಪಾವತಿಸುತ್ತಿದ್ದರು. ಹೂಡಿಕೆಯ ಹೆಸರಿನಲ್ಲಿ ಭವಿಷ್ಯಕ್ಕಾಗಿ ಹಣ ಉಳಿಸಲು ಹೋಗಿ ವರ್ತಮಾನದ ಸಂತೋಷವನ್ನು ಮುಂದೂಡುತ್ತಿರುವುದು ಅವರಿಗೆ ಅರಿವಾಯಿತು. ಉದ್ಯಮ ನಿರ್ವಹಣೆಯ ನಿರಂತರ ಒತ್ತಡ ಮತ್ತು ಚಿಂತೆಯಿಂದ ಹೊರಬರಲು ೨೦ ವರ್ಷಗಳ ಗೃಹ ಸಾಲಕ್ಕಿಂತ ತಮಗೆ ಮಾನಸಿಕ ನೆಮ್ಮದಿ ಮುಖ್ಯವೆನಿಸಿತು ಎಂದು ಅವರು ಹೇಳಿದ್ದಾರೆ.
ಅಂತಿಮವಾಗಿ ಆ ಮನೆಯನ್ನು ಮಾರಿ ೧೨೬೨ ಸಿಸಿ ಸಾಮರ್ಥ್ಯದ ಡುಕಾಟಿ ಬೈಕ್ ಖರೀದಿಸಿದ ಸುಭಾಷ್, ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ರೌಂಡ್ಸ್ ಹೊಡೆಯುವಾಗ ಸಿಗುವ ಸಂತಸ ವರ್ಣಿಸಲಸಲಸಾಧ್ಯ ಎಂದಿದ್ದಾರೆ. ರಸ್ತೆಯಲ್ಲಿ ಸಿಕ್ಕ ಹಿರಿಯ ನಾಗರಿಕರೊಬ್ಬರು ಮತ್ತು ಬೈಕ್ ಪ್ರೇಮಿಯೊಬ್ಬರಿಗೆ ತಮ್ಮ ಬೈಕ್ ಓಡಿಸಲು ಅವಕಾಶ ನೀಡಿದ ಅನುಭವವನ್ನು ಹಂಚಿಕೊಂಡಿರುವ ಅವರು, ಬಯಸಿದ ಕನಸುಗಳನ್ನು ಈಡೇರಿಸಿಕೊಳ್ಳಲು ವಯಸ್ಸಾಗುವವರೆಗೆ ಕಾಯುವುದು ಬುದ್ಧಿವಂತಿಕೆಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಭಾಷ್ ಅವರ ಈ ಪೋಸ್ಟ್ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಜೀವನ ಎಂದರೆ ಕ್ಷಣಗಳನ್ನು ಆನಂದಿಸುವುದು ಮತ್ತು ಮನಸ್ಸಿಗೆ ಸಂತೋಷ ನೀಡುವ ವಿಷಯಗಳಲ್ಲಿ ಹೂಡಿಕೆ ಮಾಡುವುದು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
“>