ಶಿವಮೊಗ್ಗ : ರಾಜ್ಯದಲ್ಲಿ 1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲೆಗಳಿಗೆ ಸರ್ಕಾರದಿಂದ ವೇತನಾನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ, ಶಿಕಾರಿಪುರದ ಶಿಕ್ಷಕರೊಬ್ಬರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ತಮ್ಮ ರಕ್ತದಲ್ಲೇ ಪತ್ರ ಬರೆಯುವ ಮೂಲಕ ವಿನೂತನ ಹಾಗೂ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ್ದಾರೆ.
ಪ್ರಶಾಂತ್ ಸಿರೆಂಜೆ ಎಂಬ ಶಿಕ್ಷಕರೇ ತಮ್ಮ ರಕ್ತದಿಂದ ಪತ್ರ ಬರೆದು ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ಶಾಲೆಗಳಿಗೆ ಕೂಡಲೇ ಅನುದಾನ ಒದಗಿಸುವಂತೆ ಮನವಿ ಮಾಡಿದ್ದಾರೆ. ಅನುದಾನ ಸಿಕ್ಕರೆ ಮಾತ್ರ ಈ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಸರ್ಕಾರದಿಂದ ಸೂಕ್ತ ವೇತನ ದೊರೆಯಲು ಸಾಧ್ಯ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಚಿವರ ಹಳೆಯ ಹೇಳಿಕೆಯನ್ನು ನೆನಪಿಸಿದ ಶಿಕ್ಷಕ ಪ್ರಶಾಂತ್, "ಸಚಿವರಾದ ಮಧು ಬಂಗಾರಪ್ಪ ಅವರು ಹಿಂದೆ 'ನನ್ನ ರಕ್ತದಲ್ಲೇ ಕನ್ನಡವಿದೆ' ಎಂದು ಹೇಳಿದ್ದರು. ಆ ಕಾರಣಕ್ಕಾಗಿಯೇ ನಾನು ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಅನುದಾನವಿಲ್ಲದೆ ಕನ್ನಡ ಶಾಲೆಗಳು ರಕ್ತಹೀನತೆಯಿಂದ ನರಳುತ್ತಿವೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ನವೆಂಬರ್ 1ರಂದು ಇತರ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರೂ ರಕ್ತದಲ್ಲಿ ಪತ್ರ ಬರೆದು ಹೋರಾಟ ನಡೆಸಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.